ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಕೋಟಿ ಕ್ಷಬ್ ಸೇರಿರುವ ಸಿನಿಮಾ ದೇಶ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಆದರೆ, ಈ ಸಿನಿಮಾ ರಿಲೀಸ್ ಆದ ಬಳಿಕ ಕೆಲವರು ದೈವವನ್ನು ಅನುಕರಣೆ ಮಾಡಲು ಹೋಗಿದ್ದು ಇದೀಗ ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈಗ ಇದೇ ರೀತಿ ಮಾಡಿದ ವ್ಯಕ್ತಿಯೋರ್ವ ಸೋಷಿಯಲ್ ಮೀಡಿಯಾ ಮೂಲಕ ಕ್ಷಮೆ ಕೇಳಿದ್ದಾನೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಕಂಡಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಸಿನಿಮಾ ರಿಲೀಸ್ ಆದ ಬಳಿಕ ವ್ಯಕ್ತಿಯೊಬ್ಬನು ಥಿಯೇಟರ್ನ ಹೊರ ಭಾಗದಲ್ಲಿ ದೈವ ಬಂದಂತೆ ಆಡಿದ್ದು ಈ ವಿಡಿಯೋ ಸಖತ್ ವೈರಲ್ ಆಗಿತ್ತು. ‘ರಿಷಬ್ ಅವರಲ್ಲಿ ದೇವರನ್ನು ನೋಡಿದೆ’ ಎಂದೆಲ್ಲ ಆತ ಹೇಳಿಕೊಂಡಿದ್ದ.
ಈ ವಿಡಿಯೋ ವೈರಲ್ ಆದ ಬಳಿಕ ಅನೇಕರು ವಿರೋಧ ಹೊರ ಹಾಕಿದ್ದರು. ಈ ರೀತಿ ಮಾಡೋದು ಸರಿ ಅಲ್ಲ ಎಂದು ಕೆಲವರು ಹೇಳಿದ್ದರು. ಇದು ದೈವಕ್ಕೆ ಮಾಡುವ ಅವಮಾನ ಎಂಬ ಮಾತುಗಳು ಕೂಡ ಕೇಳಿ ಬಂದವು. ಈಗ ಈ ವಿಚಾರದಲ್ಲಿ ಆ ವ್ಯಕ್ತಿ ಕ್ಷಮೆ ಕೇಳಿದ್ದಾನೆ.
‘ನನ್ನ ಹೆಸರು ವೆಂಕಟ್ ಎಂದು. ಇತ್ತೀಚೆಗೆ ವೈರಲ್ ಆದ ವಿಡಿಯೋ ನೋಡಿರ್ತೀರಿ. ಅದು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ರಿಷಬ್ ಶೆಟ್ಟಿ, ಕಾಂತಾರ ಟೀಮ್ಗೆ ನನ್ನ ಕ್ಷಮೆ ಇರಲಿ. ಮಂಗಳೂರು ಜನತೆಗೆ, ತುಳು ನಾಡಿನ ಜನತೆಗೆ ಕ್ಷಮೆ ಇರಲಿ. ಪ್ಲೀಸ್ ಈ ರೀತಿ ಮಾಡಬೇಡಿ. ಈ ಘಟನೆ ಆದಾಗಿನಿಂದ ಮನಸ್ಸಿಗೆ ನೆಮ್ಮದಿ-ಶಾಂತಿ ಇಲ್ಲ. ನನ್ನನ್ನು ಕ್ಷಮಿಸಿ’ ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.