ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಈಗಾಗಲೇ ಟೀಸರ್, ಹಾಡುಗಳು ಮತ್ತು ಮೇಕಿಂಗ್ ವಿಡಿಯೋಗಳ ಮೂಲಕ ಭಾರಿ ಸದ್ದು ಮಾಡಿದೆ. ಆದರೆ ನಾಯಕ ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಯಿತು.
ಚಿತ್ರತಂಡದಲ್ಲಿ ನಿರ್ದೇಶಕ ಪ್ರಕಾಶ್ ವೀರ್, ನಟಿಯರಾದ ರಚನಾ ರೈ, ಶರ್ಮಿಳಾ ಮಂಡ್ರೆ, ನಟ ಅಚ್ಯುತ್ ಕುಮಾರ್, ಕಾರ್ಯಕಾರಿ ನಿರ್ಮಾಪಕಿ ತಶ್ವಿನಿ ವೀರ್, ಗಾಯಕ ಅನಿರುದ್ದ್ ಶಾಸ್ತ್ರಿ, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಸಂಭಾಷಣೆ ಬರಹಗಾರ ಕಾಂತರಾಜ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಸೇರಿದಂತೆ ಇಡೀ ತಂಡ ಭಾಗವಹಿಸಿತು. ಡಿಸೆಂಬರ್ 5ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರಕಾಶ್ ವೀರ್ ಮಾತನಾಡುತ್ತ, “ಈ ಕಥೆಯನ್ನು ನಾನು ದರ್ಶನ್ ಅವರಿಗೆ 2018ರಲ್ಲಿ ಹೇಳಿದ್ದೆ. ಅವರು ಕಥೆಯನ್ನು ಒಪ್ಪಿಕೊಂಡರೂ, ಕೋವಿಡ್ ಹಾಗೂ ವೈಯಕ್ತಿಕ ಆಘಾತಗಳಿಂದ ಸಿನಿಮಾ ವಿಳಂಬವಾಯಿತು. ನಂತರ ದರ್ಶನ್ ಕಾಟೇರಾ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ನಾವು ಕಾಯಬೇಕಾಯಿತು. 2024ರಲ್ಲಿ ಸಿನಿಮಾ ಶೂಟಿಂಗ್ ಪ್ರಾರಂಭವಾಯಿತು. ಪ್ರೆಸ್ ಮೀಟ್ ಮಾಡುವುದಕ್ಕೂ ನಾವು ದರ್ಶನ್ ಅವರನ್ನು ಕಾಯುತ್ತಿದ್ದೆವು. ಆದರೆ ಅವರು ಇಂದು ನಮ್ಮ ಜೊತೆ ಇಲ್ಲ. ಅವರು ಇದ್ದಿದ್ದರೆ ನನಗೆ ಆನೆಬಲ ಇದ್ದಂತಾಗುತ್ತಿತ್ತು” ಎಂದರು.
ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದ ಅವರು, “ಇದ್ರೇ ನೆಮ್ದಿಯಾಗ್ ಇರ್ಬೇಕ್’ ಹಾಡು ನಮ್ಮ ಕಥೆಗೆ ಸೂಟ್ ಆಗುತ್ತದೆ ಎಂಬ ಕಾರಣಕ್ಕೆ ಆಯ್ಕೆ ಮಾಡಿದೆವು. ಆ ಹಾಡಿನ ಕೆಲವು ಸಾಲುಗಳು ದರ್ಶನ್ ಅವರ ವೈಯಕ್ತಿಕ ಜೀವನಕ್ಕೆ ಹೋಲಿಕೆಯಾಗುತ್ತವೆ ಎಂಬುದನ್ನು ನಂತರ ತಿಳಿದುಕೊಂಡೆವು. ಅದರಲ್ಲಿ ಯಾವುದೇ ಉದ್ದೇಶ ಇರಲಿಲ್ಲ” ಎಂದರು.
“ಜೈಲು ಬಿಡುಗಡೆಗೊಂಡ ನಂತರ ದರ್ಶನ್ 9 ತಿಂಗಳ ನಂತರ ಸೆಟ್‌ಗೆ ಮರಳಿ ಬಂದು ಪ್ರೊಫೆಶನಲ್ವಾಗಿ ಶೂಟಿಂಗ್ ಮುಗಿಸಿದರು. ಸೆಟ್‌ನಲ್ಲಿ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಎಂದೂ ಮಾತನಾಡಲಿಲ್ಲ. ‘ದಿ ಡೆವಿಲ್’ ದರ್ಶನ್ ಅಭಿಮಾನಿಗಳಿಗಾಗಿ ಮಾಡಿರುವ ಸಿನಿಮಾ” ಎಂದು ಪ್ರಕಾಶ್ ವೀರ್ ಹೇಳಿದರು.
ನಾಯಕಿ ರಚನಾ ರೈ ಮಾತನಾಡಿ, “ಡೆವಿಲ್ ನನ್ನನ್ನು ಕರ್ನಾಟಕಕ್ಕೆ ಪರಿಚಯ ಮಾಡುತ್ತಿರುವ ಸಿನಿಮಾ. ಈ ಅವಕಾಶ ನಾನು ಎಂದಿಗೂ ಮರೆಯುವುದಿಲ್ಲ” ಎಂದು ಸಂತಸ ಹಂಚಿಕೊಂಡರು. ಅಚ್ಯುತ್ ಕುಮಾರ್ ತಮ್ಮ ಪ್ರತಿಕ್ರಿಯೆಯಲ್ಲಿ, “ದರ್ಶನ್ ಜೊತೆಗೆ ನಾಲ್ಕು ಸಿನಿಮಾಗಳನ್ನು ಮಾಡಿದ್ದೇನೆ. ಅವರು ಮಾತ್ರ ನಟನಲ್ಲ, ಒಳ್ಳೆಯ ಹೃದಯದ ಮನುಷ್ಯ” ಎಂದು ಗುರುತಿಸಿದರು.
ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ, ರಾಮ್–ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಸೇರಿದಂತೆ ಭರ್ಜರಿ ತಂಡ ‘ದಿ ಡೆವಿಲ್’ ನಿರ್ಮಾಣದಲ್ಲಿ ತೊಡಗಿದೆ. ತಶ್ವಿನಿ ವೀರ್ ಕಾರ್ಯಕಾರಿ ನಿರ್ಮಾಪಕಿ.
ದರ್ಶನ್ ಅವರ ಜೋಡಿಯಾಗಿ ರಚನಾ ರೈ ನಟಿಸಿದ್ದು, ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಮೊದಲಾದವರು ಅಭಿನಯಿಸಿದ್ದಾರೆ. ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡ ‘ದಿ ಡೆವಿಲ್’ ಚಿತ್ರವನ್ನು ಡಿಸೆಂಬರ್ 11ರಂದು ಕರ್ನಾಟಕದಾದ್ಯಂತ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆ.ವಿ.ಎನ್. ಸುಪ್ರೀತ್ ಅದ್ದೂರಿಯಾಗಿ ಬಿಡುಗಡೆ ಮಾಡಲಿದ್ದಾರೆ.



