ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಮನುಷ್ಯ ಯಾವಾಗಲೂ ಆಶಾವಾದಿಯಾಗಿ ಬದುಕಬೇಕಲ್ಲದೇ ನಿರಾಶಾವಾದಿಗಳಾಗಬಾರದು. ಜೀವನದಲ್ಲಿ ಭರವಸೆ ಎಂಬ ದೀಪ ಎಂದಿಗೂ ಆರಬಾರದು. ಧರ್ಮ ದೀಪದ ಬೆಳಕಿನಿಂದ ಮನುಷ್ಯನ ಅಜ್ಞಾನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ತಿರುಮಲಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾರಥೋತ್ಸವ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕಿನ ಚಟುವಟಿಕೆಗಳು ಸಂಪೂರ್ಣ ಸಾಕಾರಗೊಳ್ಳುವುದು ಧಾರ್ಮಿಕ ಮೌಲ್ಯಗಳ ಪರಿಪಾಲನೆಯಿಂದಲೇ ಹೊರತು ಜ್ಞಾನ ಬೋಧನೆಯಿಂದಲ್ಲ. ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಪರಿಸರದಲ್ಲಿ ಪರಿವರ್ತನೆಗೊಂಡಿದ್ದರೂ ಜೀವನ ಮೌಲ್ಯಗಳು ಬದಲಾಗುವುದಿಲ್ಲ. ಸಾಮಾಜಿಕ ವ್ಯವಸ್ಥೆಯ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಜೀವನ ನಿಂತ ನೀರಾಗಬಾರದು. ಹರಿಯುವ ಪವಿತ್ರ ಗಂಗಾ ಜಲವಾಗಬೇಕು. ಪ್ರಯತ್ನ ಮತ್ತು ಚಲನಶೀಲತೆ ಆದರ್ಶ ಜೀವನದ ಗುಟ್ಟು ಎಂಬುದನ್ನು ಮರೆಯಬಾರದು ಎಂದರು.
ನೇತೃತ್ವ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕಾಲು ಜಾರಿದಾಗ ಆಗುವ ಅನಾಹುತಕ್ಕಿಂತ ನಾಲಿಗೆ ಜಾರಿದಾಗ ಆಗುವ ಅಪಾಯವೇ ಹೆಚ್ಚು. ಧರ್ಮ ಮಾರ್ಗದಲ್ಲಿ ನಡೆದು ಬದುಕು ಕಟ್ಟಿಕೊಳ್ಳಬೇಕೆಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಆಧುನಿಕತೆಯ ಹೆಸರಿನಲ್ಲಿ ನಿಜವಾದ ಜೀವನ ಮೌಲ್ಯಗಳು ಕಣ್ಮರೆಯಾಗಬಾರದು. ತಾತ್ವಿಕವಾಗಿ ಬಾಳುವ ಶುದ್ಧ ಶಕ್ತಿ, ಸಾತ್ವಿಕವಾಗಿ ಬದುಕಬೇಕೆಂಬ ಮನಸ್ಸು, ಶುದ್ಧವಾಗಿ ವರ್ತಿಸುವ ಜೀವನ ಬೆಳೆದು ಬಂದಾಗ ಬಾಳು ಸುಂದರಗೊಳ್ಳುತ್ತದೆ ಎಂದರು.
ಸ್ವಾಗತಿಸಿ ನಿರೂಪಿಸಿದ ಉಮದಿ ದಾನಯ್ಯ ದೇವರು ಮಾತನಾಡಿ, ವಸಂತಾಗಮನದಲ್ಲಿ ಸೃಷ್ಟಿ ಹೊಸ ಚೈತನ್ಯ ಹೊಂದುವಂತೆ ಮಾನವ ಜೀವನ ಆದರ್ಶಗಳ ಪರಿಪಾಲನೆಯಿಂದ ಬದುಕಿಗೆ ಬಲ ತರುವ ಕೆಲಸ ಮಾಡಬೇಕಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ವಿಚಾರ ಧಾರೆಗಳು ಸುಖ-ಶಾಂತಿಯ ಬದುಕಿಗೆ ಆಶಾಕಿರಣವಾಗಿವೆ ಎಂದರು. ತಿರುಮಲಕೊಪ್ಪದ ಗುರುಸಿದ್ಧಯ್ಯ ಹಿರೇಮಠ, ಯಲಿವಾಳದ ಶ್ರೀಕಂಠಗೌಡ ಹಿರೇಗೌಡ್ರ, ಸುರಶೆಟ್ಟಿಕೊಪ್ಪದ ಗಂಗಯ್ಯ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಕ್ರೋಧಿನಾಮ ಸಂವತ್ಸರದ ಕೊನೆಯ ದಿನವಾದ ಯುಗಾದಿ ಅಮವಾಸ್ಯೆಯಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಸಕಲ ಜೀವಾತ್ಮರಿಗೆ ಒಳಿತಾಗಬೇಕು, ಎಲ್ಲರೂ ಸಾಮರಸ್ಯದಿಂದ ಬಾಳಿ ಬದುಕಬೇಕೆಂಬ ಸದುದ್ದೇಶದಿಂದ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.
ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಬದುಕು ನಿರರ್ಥಕ. ಪ್ರಾಣ, ಯೌವನ, ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಸದ್ವಿದ್ಯೆ, ಸಂಬಂಧ ಮತ್ತು ಸ್ನೇಹ ನಮ್ಮೊಂದಿಗೆ ಇದ್ದರೆ ಬಾಳೆಲ್ಲ ಸುಖಮಯವಾಗುತ್ತದೆ ಎಂಬ ಶ್ರೀ ಜಗದ್ಗುರು ರೇಣುಕಾಚಾರ್ಯರ ಸತ್ಯ ಸಂದೇಶ ಮರೆಯಲಾಗದು. ವ್ಯಕ್ತಿತ್ವ ವಿಕಸನಕ್ಕೆ ಧರ್ಮ ಆಧ್ಯಾತ್ಮಗಳ ಕೊಡುಗೆ ಅಪಾರ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಯುಗಪುರುಷರಾಗಿ ಅವತರಿಸಿ ಜಾತಿ, ಮತ, ಪಂಥ ಮೀರಿ ಸರ್ವರಿಗೂ ಒಳಿತನ್ನು ಉಂಟು ಮಾಡಿದ್ದನ್ನು ಎಂದಿಗೂ ಮರೆಯಲಾಗದು ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.