ಬೆಂಗಳೂರು: ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೂಲಕ ಅನಧಿಕೃತವಾಗಿ ವಿದೇಶಗಳಿಗೆ ಹಣ ವರ್ಗಾವಣೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಬೆಂಗಳೂರು ಮೂಲದ ಐದು ಪ್ರಮುಖ ಕಂಪನಿಗಳ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಈ ವೇಳೆ ಸುಮಾರು 6 ಕೋಟಿ ರೂ. ಹೊಂದಿದ್ದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999ರ ಸೆಕ್ಷನ್ 37ರ ಅಡಿಯಲ್ಲಿ ಜೂನ್ 17ರಂದು ಬೆಂಗಳೂರು ವಲಯದ ಇಡಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟ್ರಾನ್ಸಾಕ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕ್ಯಾರೆಟ್ಎಕ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮೋಕ್ಷಜ್ಞ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಬೈಹಟ್ಕೆ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಅಭಿಭಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಐದು ಕಂಪನಿಗಳಿಗೆ ಸೇರಿದ ಆರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಡಿಜಿಟಲ್ ಸ್ವತ್ತುಗಳ ಬಳಕೆ ಮೂಲಕ ಕಾನೂನುಬಾಹಿರವಾಗಿ ವಿದೇಶಗಳಿಗೆ ಹಣ ರವಾನಿಸಲು ಈ ಸಂಸ್ಥೆಗಳು ನೆರವಾಗಿವೆ ಎಂಬ ಆರೋಪದ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ. ದಾಳಿ ವೇಳೆ ಅಕ್ರಮ ವಹಿವಾಟುಗಳಿಗೆ ಬಳಸಲಾಗಿದೆ ಎನ್ನಲಾದ ಕೆಲವು ಬ್ಯಾಂಕ್ ಖಾತೆಗಳ ಮೇಲೆ ತಡೆಯಾಜ್ಞೆ ವಿಧಿಸಲಾಗಿದೆ.
ಈ ಖಾತೆಗಳಲ್ಲಿ ಸುಮಾರು 6 ಕೋಟಿ ರೂ. ಹಣ ಲಭ್ಯವಿದ್ದು, ಅಗತ್ಯ ಅನುಮತಿ ಪಡೆಯದೆ ಫೆಮಾ ನಿಯಮಗಳನ್ನು ಉಲ್ಲಂಘಿಸಿ ವಿದೇಶಗಳಿಗೆ ಹಣ ವರ್ಗಾವಣೆ ಮಾಡಲು ಅವುಗಳನ್ನು ಬಳಸಲಾಗಿದೆ ಎಂಬ ಶಂಕೆಯನ್ನು ಇಡಿ ವ್ಯಕ್ತಪಡಿಸಿದೆ.
ಇದೇ ವೇಳೆ ಬಹುಕೋಟಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಹೀರಾ ಗ್ರೂಪ್ ಆಫ್ ಕಂಪನಿಗಳ ಮುಖ್ಯಸ್ಥೆ ನೊಹೀರಾ ಶೇಖ್ ಹಾಗೂ ಅವರಿಗೆ ಸಂಬಂಧಿಸಿದ ಸಂಸ್ಥೆಗಳ 159 ಕೋಟಿ ರೂ. ಮೌಲ್ಯದ 23 ಸ್ಥಿರ ಆಸ್ತಿಗಳನ್ನು ಇಡಿ ಯಶಸ್ವಿಯಾಗಿ ಹರಾಜು ಹಾಕಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ವಂಚನೆಗೊಳಗಾದ ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.



