ಲಂಡನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆ ಕಂಡಿದೆ. ಕೋವಿಡ್-19 ಬಳಿಕ ಮೊದಲ ಬಾರಿಗೆ ಒಂದು ಬ್ಯಾರೆಲ್ ತೈಲದ ಬೆಲೆ 90 ಡಾಲರ್ ಗಡಿ ದಾಟಿದೆ.
ಇರಾನ್ ಸೌದಿ ಅರೇಬಿಯಾ ಹಾಗೂ ಕುವೈತ್‌ನಲ್ಲಿರುವ ತೈಲ ಸಂಸ್ಕರಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ತೈಲ ಉತ್ಪಾದನೆ ಕುಸಿತವಾಗಿದೆ. ಇದರ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 91.89 ಡಾಲರ್ (ಸುಮಾರು ₹8,440) ತಲುಪಿದೆ.
ಕಳೆದ ಶನಿವಾರ ಯುದ್ಧ ಆರಂಭವಾಗುವ ಮೊದಲು ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 72.50 ಡಾಲರ್ ಇತ್ತು. ಕಳೆದ ಎಂಟು ದಿನಗಳಲ್ಲಿ ಸುಮಾರು 19 ಡಾಲರ್ ಏರಿಕೆಯಾಗಿದೆ.
ಇದೇ ವೇಳೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 90.90 ಡಾಲರ್‌ಗೆ ಏರಿಕೆಯಾಗಿದೆ. ರಷ್ಯಾದ ಉರಲ್ಸ್ ಕಚ್ಚಾ ತೈಲದ ಬೆಲೆ ಕೂಡ ಪ್ರತಿ ಬ್ಯಾರೆಲ್‌ಗೆ 71.97 ಡಾಲರ್ (ಸುಮಾರು ₹6,616) ತಲುಪಿದೆ.
ಫೆಬ್ರವರಿ 27ರಂದು ಉರಲ್ಸ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 57 ಡಾಲರ್ ಇದ್ದು, ಇದೀಗ ಅದರಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.



