ವಿಜಯಸಾಕ್ಷಿ ಸುದ್ದಿ, ನರೇಗಲ್ : ನಿಮ್ಮ ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ, ನಿಮ್ಮ ಮುಂದಿರುವ ಮಕ್ಕಳ ಬಾಳನ್ನು ಶಿಕ್ಷಣದ ಮೂಲಕ ಬೆಳಗಲು ಬಂದವರು. ನಿಮ್ಮ ಶ್ರದ್ಧೆಯೇ ಶಿಕ್ಷಣ ಸಂಸ್ಥೆಗಳ ಏಳಿಗೆಗೆ ಕಾರಣ. ಆದ್ದರಿಂದ ಶಿಕ್ಷಣ ಸಂಸ್ಥೆಗಳೆಂದಿಗೂ ಕಳಪೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ನಾಡಿನ ಎಲ್ಲ ಶಿಕ್ಷಕರ ಮೇಲಿದೆ ಎಂದು ಹಾಲೆಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಅಕ್ಷರ ಭಾರತ ಪ್ರತಿಷ್ಠಾನ ಹಾಗೂ ನರೇಗಲ್ಲ ಪಟ್ಟಣದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಆಶ್ರಯದಲ್ಲಿ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ, ಹೊಸಪೇಟೆಯ ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರ, ಬೇಲೂರು ಜಾಲಿಹಾಳ ಭಾಗದ ಬೇಲೂರು ವಿದ್ಯಾವರ್ಧಕ ಸಂಘ ಹಾಗೂ ಹನಮಸಾಗರದ ಅನ್ನದಾನೇಶ್ವರ ವಿದ್ಯಾವರ್ಧಕ ಸಂಘದ ಎಲ್ಲ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಶೈಕ್ಷಣಿಕ ಪುನಶ್ಚೇತನ ಶಿಬಿರ ಉದ್ಘಾಟನೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶ್ರೀಮಠದ ಹಿಂದಿನ ಪೀಠಾಧಿಪತಿಗಳು ದೊಡ್ಡ ಕನಸಿನೊಂದಿಗೆ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯನ್ನು ಸ್ಥಾಪಿಸಿ, ಆ ಮೂಲಕ ಯಾವುದೇ ಹೆಚ್ಚಿನ ಫಲಾಪೇಕ್ಷೆ ಇಲ್ಲದೆ ಈ ಸಂಸ್ಥೆಗಳನ್ನು ಕಟ್ಟಿದ್ದಾರೆ.
ಇಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೀವೆಲ್ಲರೂ ಪ್ರತಿಭಾ ಸಂಪನ್ನರೆಂಬುವುದರಲ್ಲಿ ಎರಡು ಮಾತಿಲ್ಲ. ನಿಮಗೆ ಈ ಪುನಃಶ್ಚೇತನ ತರಬೇತಿಯನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಇದನ್ನು ನೀವು ಸುಮ್ಮನೆ ಕೇಳುವ ಬದಲಾಗಿ ಅನುಭವಿಸುವ ಮೂಲಕ ಇಲ್ಲಿನ ವಿಷಯವನ್ನು ವರ್ಗ ಕೋಣೆಗಳಿಗೆ ವರ್ಗಾಯಿಸಿದರೆ ಅತ್ಯುತ್ತಮವಾದ ಫಲಿತಾಂಶ ನಮ್ಮದಾಗುತ್ತದೆ ಎನ್ನುವ ಕಲ್ಪನೆಯೊಂದಿಗೆ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ. ನೀವೆಲ್ಲರೂ ಇದಕ್ಕೆ ಸಹಕರಿಸಬೇಕು ಮತ್ತು ಸ್ಪಂದಿಸಬೇಕೆಂದು ಶ್ರೀಗಳು ತಿಳಿಸಿದರು.
ಶಿಕ್ಷಕಿ ಸುವರ್ಣಾ ಹಿರೇಮಠ ಪ್ರಾರ್ಥಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಸ್ವಾಗತಿಸಿದರು. ವೇದಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಬಿ.ಎಂ. ಹೊಕ್ರಾಣಿ, ಪ.ಪೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸುರೇಶ ಪವಾರ, ಹೊಸಪೇಟೆಯ ಸಾಲಿ ಸಿದ್ದಯ್ಯನವರು, ಎಸ್.ಎ. ಪದವಿ ಕಾಲೇಜು ಚೇರಮನ್ ಬಸವರಾಜ ವೀರಾಪೂರ, ಬೇಲೂರಿನ ಅಂದಪ್ಪ ಹಳ್ಳದ, ಶರಣಗೌಡ ಪಾಟೀಲ, ಆಡಳಿತಾಧಿಕಾರಿ ಎನ್.ಆರ್. ಗೌಡರ ಮುಂತಾದವರಿದ್ದರು.
ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ವಿ.ಬಿ. ಸೋಮನಕಟ್ಟಿಮಠ, ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ, ಸೋಮಣ್ಣ ಹರ್ಲಾಪೂರ, ಶರಣಪ್ಪ ಬೆಟಗೇರಿ, ನಿವೃತ್ತ ಉಪನ್ಯಾಸಕ ತಳಬಾಳ, ಪ.ಪೂ ಕಾಲೇಜು ನಿವೃತ್ತ ಜಂಟಿ ನಿರ್ದೇಶಕ ಗೌಡರ, ಎಂ.ಎಸ್. ದಢೇಸೂರಮಠ ಮುಂತಾದವರಿದ್ದರು. ಪುನಶ್ಚೇತನ ಶಿಬಿರದಲ್ಲಿ ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಗಳ ಸುಮಾರು 300ಕ್ಕೂ ಹೆಚ್ಚು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಕಲ್ಲಯ್ಯ ಹಿರೇಮಠ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಶ್ರೀ ಅನ್ನದಾನೇಶ್ವರ ಸಂಸ್ಥೆಯ ಅಕ್ಷರ ಭಾರತ ಪ್ರತಿಷ್ಠಾನ ಒಂದು ಮಾದರಿಯ ಸಂಸ್ಥೆಯಾಗಿದೆ. ಈ ಸಂಸ್ಥೆಯ ಅಡಿಯಲ್ಲಿ ನಡೆದಿರುವ ಇಂದಿನ ಕಾರ್ಯಕ್ರಮ ಸರಕಾರದ ಶಿಕ್ಷಣ ಇಲಾಖೆಗೂ ಸಹ ಮಾದರಿಯಾಗಿದೆ. ಮಾನವನ ಜ್ಞಾನದ ಆಳ ಬಹಳಷ್ಟು ಚಿಕ್ಕದು. ಕಲಿಕೆಗೆ ಕೊನೆಯೆಂಬುದಿಲ್ಲ. ಯಾವುದೇ ಶಿಕ್ಷಣ ಸಂಸ್ಥೆ ಬೆಳೆಯಲು ಅಲ್ಲಿನ ಶಿಕ್ಷಕರ ಶ್ರಮ ಅತ್ಯಗತ್ಯ.
ಇಲ್ಲಿನ ಶಿಕ್ಷಕರ ಸತತ ಪರಿಶ್ರಮದಿಂದ ಇಂದು ನಾಡಿನಲ್ಲಿ ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ಹೆಸರುವಾಸಿಯಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ತಾಲೂಕಿನಲ್ಲಿ ಅರ್ಹ ಅಭ್ಯರ್ಥಿಗಳಿಗೆ 10-15 ದಿನಗಳ ತರಬೇತಿ ನೀಡುವ ವಿಚಾರವಿದೆ. ರೋಣದಲ್ಲಿ ಜಿಟಿಟಿಸಿ ಕಾಲೇಜಿಗೆ ಸರಕಾರ ಅನುಮತಿ ನೀಡಿದ್ದು, ಅಲ್ಲಿ ಐಟಿಐ ಆದ ವಿದ್ಯಾರ್ಥಿಗಳು ಪ್ರವೇಶ ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದೆಂದು ಹೇಳಿದರು.