ವಿಜಯಸಾಕ್ಷಿ ಸುದ್ದಿ, ಗದಗ : ವ್ಯಾಪಾರ, ಉದ್ದಿಮೆ, ಇನ್ನಿತರೆ ವ್ಯವಹಾರಗಳಿಗೆ ಹಣಕಾಸು ವ್ಯವಸ್ಥೆ ಮೂಲ ಬಂಡವಾಳವಾಗಿರುವಂತೆ ನಿತ್ಯ ಬದುಕಿನ ವ್ಯಾಪಾರದಲ್ಲಿ `ಸಂತೃಪ್ತಿ’ ಲಾಭ ಪಡೆಯಲು ಯೊಗ ಸಾಧನೆ ಅಗತ್ಯವಾಗಿದೆ. ಯೋಗ ಸಾಧನೆಯಿಂದ ನಮ್ಮ ದೇಹ, ಮನ, ಬುದ್ಧಿ, ಭಾವಗಳು ಸಮತೋಲನ ಸ್ಥಿತಿಯಲ್ಲಿರುತ್ತವೆ. ಇದರಿಂದ ನಾವು ಹೆಚ್ಚಿನ ಆಶೆ, ಆಮಿಷಗಳಿಗೆ ಬಲಿಯಾಗುವದಿಲ್ಲ. ವಾಸ್ತವ ಅರಿತು ಜೀವನ ಸಾಗಿಸುವ ಅರಿವು ನಮ್ಮಲ್ಲಿ ಮೂಡುತ್ತದೆ. ಈ ಅರಿವಿನಿಂದ ನೆಮ್ಮದಿಯ ಬದುಕು ನಮ್ಮದಾಗುವದು ಮತ್ತು ಸದಾ ಸುಖದಿಂದಿರಲು ಸಾಧ್ಯವಾಗುವುದು ಎಂದು ಗದಗ ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ಬಾಳಿಹಳ್ಳಿಮಠ ಅಭಿಪ್ರಾಯಪಟ್ಟರು.
ಜಿಲ್ಲಾ ಆಯುಷ್ ಇಲಾಖೆ, ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಗದಗ ಜಿಲ್ಲಾ ಯೋಗ ಒಕ್ಕೂಟ ಹಾಗೂ ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಗದಗ ಇವರುಗಳ ಸಹಯೋಗದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ-24 ಕಾರ್ಯಕ್ರಮಗಳ ಅಡಿಯಲ್ಲಿ ಸ್ತ್ರೀ-ಪುರುಷರೆಲ್ಲರಿಗೂ ಸಾರ್ವಜನಿಕವಾಗಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸವೇಶ್ವರ ಹೈಸ್ಕೂಲ್ ಕ್ಯಾಂಪ್) ಮತ್ತು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಶಿವಾನುಭವ ಮಂಟಪ (ಜಗದ್ಗುರು ತೋಂಟದಾರ್ಯ ಮಠದ ಆವರಣ) ಗದಗ ಇಲ್ಲಿ ಒಂದು ವಾರ ನಡೆಯುವ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಗ ಸಾಧನೆ ಯೋಗೋತ್ಸವ-24ಕ್ಕೆ ಸೀಮಿತವಾಗಿರದೆ ಅದು ನಿರಂತರವಾಗಿರಬೇಕು. ನಾನೂ ಯೋಗ ಸಾಧನೆಯಲ್ಲಿ ತೊಡಗಿರುವೆ. ಆದರೆ ಅದು ನಿರಂತರವಾಗಿಲ್ಲ. ಹೀಗಾಗಬಾರದು. ದಿನನಿತ್ಯದ ಬದುಕನ್ನು ಯೋಗ ಸಾಧನೆಯಿಂದಲೇ ಪ್ರಾರಂಭಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೇಂಬರ್ ಆಫ್ ಕಾಮರ್ಸ್ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ಮದರಿಮಠ ಮಾತನಾಡಿ, ಇಂದು ನಾವೆಲ್ಲ ಹೆಚ್ಚಿನ ಸಮಯ ಮತ್ತು ಶ್ರಮವನ್ನು ಹಣ ಗಳಿಕೆಗಾಗಿ ಉಪಯೋಗಿಸುತ್ತೇವೆ. ಗಳಿಸಿದ ಹಣವನ್ನು ಕಾಯಿಲೆ ಬಂದಾಗ ಖರ್ಚು ಮಾಡುತ್ತೇವೆ. ಇದರ ಬದಲಾಗಿ ಹೆಚ್ಚಿನ ಸಮಯ, ಶ್ರಮಗಳನ್ನು ಯೋಗ ಸಾಧನೆಗೆ ವಿನಿಯೋಗಿಸಿದರೆ ನಮಗೆ ಆರೋಗ್ಯ ಭಾಗ್ಯ ದೊರೆಯುವದು. ಆ ಭಾಗ್ಯದಿಂದ ನಾವು ಏನೆಲ್ಲ ಗಳಿಸಬಹುದೆಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿ ನಾಗರಾಜ ಅಡವಿ, ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮಿ ಆನೆಹೊಸೂರ ಯೋಗ ತರಬೇತಿ ಶಿಬಿರದ ಮಹತ್ವದ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಯೋಗ ತರಬೇತಿ ಪಡೆಯಲು ಆಗಮಿಸಿದ ಯೋಗಾಸಕ್ತರು, ಗಣ್ಯಮಾನ್ಯರು ಪಾಲ್ಗೊಂಡಿದ್ದರು.
ಸುನಂದಾ ಜ್ಯಾನೋಪಂತರ ವಚನ ಪ್ರಾರ್ಥನೆ ಹೇಳಿದರು. ವಿಜಯಲಕ್ಷ್ಮಿ ಮೇಕಳಿ ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿದರು. ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಚೇತನ ಚುಂಚಾ ವಂದಿಸಿದರು.



