ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರಿ ನೌಕರರ ಸಂಘದ ವತಿಯಿಂದ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿರುವುದು ಖುಷಿಯ ಸಂಗತಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ಶನಿವಾರ ನಗರದ ಆದರ್ಶ ಶಿಕ್ಷಣ ಸಮಿತಿ ಕಾಲೇಜು ಮೈದಾನದಲ್ಲಿ ಗದಗ ಜಿಲ್ಲಾ ಸರಕಾರಿ ನೌಕರರ ಸಂಘದಿಂದ ನಡೆದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗುತ್ತದೆ. ಆದರೆ ಸರಕಾರಿ ನೌಕರರ ಸಂಘ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದು ಶ್ಲಾಘನೀಯ. ಲೆದರ್ ಬಾಲ್ ಟೂರ್ನಮೆಂಟ್ ಆಯೋಜಿಸುವುದು ಸುಲಭ. ಆದರೆ ಆಡುವುದು ಕಷ್ಟ. ಅಂಥ ಸವಾಲಿನ ಕ್ರೀಡೆಯಲ್ಲಿ ಸರಕಾರಿ ನೌಕರರು ಭಾಗವಹಿಸಿರುವುದು ಶ್ಲಾಘನೀಯ ಎಂದರು.
ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ಗುಂಜೀಕರ್ ಮಾತನಾಡಿ, ಸರಕಾರಿ ನೌಕರರ ಸಂಘವು ನೌಕರರ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನೌಕರರ ಮನೋಲ್ಲಾಸಕ್ಕಾಗಿ ಇಂಥಹ ಕಾರ್ಯಕ್ರಮ ರೂಪಿಸಿರುವ ಕ್ರಿಯಾಶೀಲ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಅಭಿನಂದನಾರ್ಹರು. ಗದಗ ಜಿಲ್ಲೆಯ ತಂಡ ಉತ್ತಮ ಪ್ರದರ್ಶನ ನೀಡಿ, ರಾಜ್ಯಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಡಿ.ಎಸ್. ತಳವಾರ, ಸಿದ್ದಣ್ಣ ಲಿಂಗದಾಳ, ಡಾ. ಎಸ್.ಎಸ್. ನೀಲಗುಂದ, ಡಾ. ಶರಣು ಗೋಗೇರಿ, ಶಿವಸಂಗಮ ಗ್ರುಪ್‌ನ ಪಲ್ಲೇದ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.



