ಅರ್ಥಪೂರ್ಣ ಕಲಿಕೆಗೆ ಶ್ರಮ ವಹಿಸಿ : ಆರ್.ಎಸ್. ಬುರಡಿ

0
Inauguration of pace review and educational workshop
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪ್ರತಿ ಮಗುವೂ ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಶುದ್ಧವಾದ ಬರವಣಿಗೆ, ಅರ್ಥಪೂರ್ಣ ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಲು ಶಿಕ್ಷಕರು ಪಾಠದ ಉದ್ದೇಶವನ್ನರಿತುಕೊಂಡು ಪೂರ್ವ ತಯಾರಿಯೊಂದಿಗೆ ಅರ್ಥಪೂರ್ಣ ಕಲಿಕೆಯಾಗಲು ಶ್ರಮಿಸಬೇಕು. ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಬೆಂಬಲ ನೀಡಲು ನಾವೆಲ್ಲ ತಂಡವಾಗಿ ಕೆಲಸ ನಿರ್ವಹಿಸೋಣ ಎಂದು ಶಾಲಾ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾದ ಆರ್.ಎಸ್. ಬುರಡಿ ಹೇಳಿದರು.

Advertisement

ಅವರು ಶನಿವಾರ ನಡೆದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಮಾರ್ಗದರ್ಶನ, ಮೇಲ್ವಿಚಾರಣಾ ಅಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಡಯಟ್ ಪ್ರಾಂಶುಪಾಲ ಜಿ.ಎಲ್. ಬಾರಾಟಕ್ಕೆ ಮಾತನಾಡಿ, ಶಾಲಾ ಶಿಕ್ಷಣದ ದೃಷ್ಟಿಕೋನದಲ್ಲಿ-ಹೊಸ ಶೈಕ್ಷಣಿಕ ರಚನೆ, ಪ್ರಮುಖ ಆವಿಷ್ಕಾರಗಳು, ಪಠ್ಯಕ್ರಮ ಇನ್ನೂ ಹಲವಾರು ಬದಲಾವಣೆಗಳು ಆಗುತ್ತಿವೆ. ಅದರಂತೆ ನಾವು ಸಹಿತ ಪುನಶ್ಚೇತನಗೊಂಡು ಗುಣಮಟ್ಟ ಶಿಕ್ಷಣಕ್ಕಾಗಿ ಬದ್ಧರಾಗೋಣ ಎಂದರು.

ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, 6ರಿಂದ 14 ವರ್ಷದ ಮಕ್ಕಳು 8 ವರ್ಷದ ಶಿಕ್ಷಣ ಪಡೆಯುವುದು ಕಡ್ಡಾಯ. ಶಿಕ್ಷಣ ಹಕ್ಕು ಕಾಯಿದೆಯ ಮುಖ್ಯ ಉದ್ದೇಶಗಳು ಭಾರತದಲ್ಲಿನ ಪ್ರತಿಯೊಂದು ಮಗುವು ಅವರ ಜಾತಿ, ಮತ, ಲಿಂಗ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದರು.

ಪಿಎಂ ಪೋಷಣ ಅಭಿಯಾನದ ಸಹಾಯಕ ನಿರ್ದೇಶಕ ಶಂಕರ ಹಡಗಲಿ, ನಿವೃತ್ತ ಉಪ ನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಗ್ರ ಶಿಕ್ಷಣ ಅಧಿಕಾರಿಗಳು, ಪಿಎಂ ಪೋಷಣ ಅಭಿಯಾನದ ಜಿಲ್ಲಾ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ಕ್ಷೇತ್ರ ಸಮನ್ವಯಾಧಿಕಾರಿಗಳು, ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ಸಿಆರ್‌ಪಿ, ಬಿಆರ್‌ಪಿ, ಇಸಿಓ, ಎಪಿಸಿಓ ಹಾಜರಿದ್ದರು.

ಸರೋಜಿನಿ ಬಂಡಿವಡ್ಡರ ಪ್ರಾರ್ಥಿಸಿದರು. ಡಿವೈಪಿಸಿ ಅಧಿಕಾರಿ ಕಂಬಳಿ ಸ್ವಾಗತಿಸಿದರು. ಎಂ.ಎ. ಯರಗುಡಿ ನಿರೂಪಿಸಿದರು. ಎಂ.ಎಚ್. ಸವದತ್ತಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here