ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದಲ್ಲಿ ಆರ್ಯ ವೈಶ್ಯ ಸಮಾಜದವರಿಂದ ನೂತನವಾಗಿ ನಿರ್ಮಾಣಗೊಂಡಿರುವ ನಗರೇಶ್ವರ ದೇವಸ್ಥಾನದ ಉದ್ಘಾಟನೆಯ ಕಾರ್ಯಗಳು ಜುಲೈ 10ರಿಂದ 12ರವರೆಗೆ ಜರುಗಲಿವೆ ಎಂದು ನರೇಗಲ್ಲ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ನವಲಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,
ನೂತನವಾಗಿ ನಿರ್ಮಾಣಗೊಂಡ ದೇವಸ್ಥಾನದಲ್ಲಿ ಶ್ರೀ ಕನ್ಯಕಾ ಪರಮೇಶ್ವರಿ, ಶ್ರೀ ನಗರೇಶ್ವರ, ಶ್ರೀ ವೆಂಕಟೇಶ್ವರ, ಶ್ರೀ ವಿಘ್ನೇಶ್ವರ, ಶ್ರೀ ಆಂಜನೇಯ ಹಾಗೂ ಶ್ರೀ ನಂದಿಮೂರ್ತಿಗಳ ಪ್ರತಿಷ್ಠಾಪನೆಯು ಸೂಡಿಯ ಶ್ರೀ ಚಿದಂಬರೇಶ್ವರ ದೇವಸ್ಥಾನದ ವೇ. ಬ್ರ. ಶ್ರೀ ಭುಜಂಗಭಟ್ಟ ಜೋಷಿಯವರ ನೇತೃತ್ವದಲ್ಲಿ ಜರುಗಲಿವೆ ಎಂದು ಹೇಳಿದರು.
ಮುಂಡರಗಿಯಲ್ಲಿನ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನವನ್ನು ನೋಡಿ ಬಂದ ನಂತರ ನಮಗೂ ಸಹ ನರೇಗಲ್ಲದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂಬ ಯೋಚನೆ ಹೊಳೆಯಿತು. ದೇವಿಯ ಮೇಲೆ ಭಾರ ಹಾಕಿ ಶ್ರೀ ನಗರೇಶ್ವರನನ್ನು ನಂಬಿ ಈ ಕಾರ್ಯಕ್ಕೆ ಕೈ ಹಾಕಿದಾಗ 2017ರ ಡಿಸೆಂಬರ್‌ದಲ್ಲಿ ಪ್ರಾರಂಭಗೊಂಡ ಈ ದೇವಸ್ಥಾನ ಇಂದು ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಇದಕ್ಕೆ ಸುತ್ತಲಿನ ಗ್ರಾಮಗಳ ಎಲ್ಲ ಆರ್ಯ ವೈಶ್ಯ ಬಾಂಧವರು ನೀಡಿದ ಸಹಾಯ-ಸಹಕಾರವನ್ನು ನಾವೆಂದಿಗೂ ಮರೆಯಲಾರೆವು ಎಂದರು.
ನಗರೇಶ್ವರ ದೇವಸ್ಥಾನ ನಿರ್ಮಾಣ ಮಾಡುತ್ತೇವೆ ಜಾಗೆ ನೀಡಿ ಸಹಕರಿಸಿ ಎಂದು ಅಶೋಕ ಕುಲಕರ್ಣಿಯವರನ್ನು ವಿನಂತಿಸಿದಾಗ ಅವರು ಭೂಮಿ ದಾನ ಮಾಡಿದ್ದಾರೆ. ಈ ಮೂರು ದಿನಗಳ ಸಂಪೂರ್ಣ ಪ್ರಸಾದದ ವ್ಯವಸ್ಥೆಯನ್ನು ವಹಿಸಿಕೊಳ್ಳಲು ಉದ್ಯಮಿ ಗೋವಿಂದರಾಜ ಗುಡಿಸಾಗರ ಮತ್ತು ವಿಜಯಕುಮಾರ ಶೆಟ್ಟರ ಅತ್ಯಂತ ಭಕ್ತಿಯಿಂದ ಮುಂದಾಗಿದ್ದಾರೆ. ಗದಗ ಜಿಲ್ಲಾ ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ಎನ್. ರಾಮರಾವ್ ಅವರು ನಮ್ಮ ಈ ಕಾರ್ಯಕ್ರಮಕ್ಕೆ ಶಾಮಿಯಾನದ ಸೇವೆಯನ್ನು, ವಿದ್ಯುತ್ ಅಲಂಕಾರದ ಸೇವೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸಿಕೊಟ್ಟು ನಮ್ಮ ಭಾರವನ್ನು ಕಡಿಮೆ ಮಾಡಿದ್ದಾರೆ. ಅವರೆಲ್ಲರಿಗೂ ನಮ್ಮ ಸಮಾಜದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ವೀರಣ್ಣ ಇಲ್ಲೂರ ಮಾತನಾಡಿ, ದೇವಸ್ಥಾನದ ನಿರ್ಮಾಣಕ್ಕೆ ಅಂದಾಜು 45ರಿಂದ 50 ಲಕ್ಷ ರೂ. ವೆಚ್ಚ ತಗುಲಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭದಲ್ಲಿ 4-5 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸುರೇಶ ನವಲಿ ಮಾತನಾಡಿ, ಜುಲೈ 10ರ ಬೆಳಿಗ್ಗೆ 102 ಮುತ್ತೈದೆಯರಿಂದ ಕುಂಭ ಮೇಳ ಜರುಗಲಿದ್ದು, ಪ್ರತಿಷ್ಠಾಪನೆಗೊಳ್ಳಲಿರುವ ಎಲ್ಲ ಮೂರ್ತಿಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಮಧ್ಯಾಹ್ನ 3ಕ್ಕೆ ಶ್ರೀ ವಾಸವಿ ಭಜನಾ ಮಂಡಳಿ ಕೂಡ್ಲಗಿ ಇವರಿಂದ ಭಜನೆ ಮತ್ತು ಕೊಟ್ಟೂರಿನ ಶ್ರೀ ವಾಸವಿ ಸಾಂಸ್ಕೃತಿಕ ಸೌರಭ ತಂಡದಿಂದ ಶ್ರೀ ವಾರಿ ಸೇವಾ ರೂಪಕ ನಡೆಯಲಿದೆ ಎಂದರು.
ಜು. 11ರಂದು ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗದಗ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಎನ್. ರಾಮರಾವ್, ಬೆಳಗಾವಿ ವಿಭಾಗದ ಅಧ್ಯಕ್ಷ ಸತ್ಯನಾರಾಯಣ ಹೇಮಾದ್ರಿ, ವಿಭಾಗೀಯ ಕಾರ್ಯದರ್ಶಿ ಪ್ರಶಾಂತ ಗುತ್ತಲ, ಬೆಂಗಳೂರಿನ ಹರೀಶ ವಡವಡಗಿ, ರಾಘವೇಂದ್ರ ಕಾಲವಾಡ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಬೆಟದೂರ, ಭೂದಾನಿ ಅಶೋಕ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ.
ಭಾರತಿ ಧರ್ಮಾಯತ ಇಂಜಿನಿಯರ್ ಮತ್ತು ವಿಶ್ವನಾಥಭಟ್ಟ ಗ್ರಾಮಪುರೋಹಿತ ಕಟ್ಟಡ ನಿರ್ಮಾಣದ ಸಮಯದಲ್ಲಿ ಅನೇಕ ಸಲಹೆ-ಸೂಚನೆಗಳನ್ನು ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಮಿತ ದೇವರಂಗಡಿ, ವಿಜಯ ನವಲಿ ಮತ್ತಿತರರು ಪಾಲ್ಗೊಂಡಿದ್ದರು.
ಜು. 12ರಂದು ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯದ ನಂತರ ಧಾರ್ಮಿಕ ಸಭೆ ಜರುಗಲಿದೆ. ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶ್ರೀಗಳವರು ದಿವ್ಯ ಸಾನಿಧ್ಯ ವಹಿಸಲಿದ್ದು, ಭಾಗ್ಯನಗರದ ಕೆ. ಶ್ರೀನಿವಾಸ ಗುಪ್ತಾ, ಹುಬ್ಬಳ್ಳಿಯ ಶಿವಾನಂದ ಕಂಪ್ಲಿ, ನಾರಾಯಣ ವಡ್ಡಟ್ಟಿ, ಸುರೇಶ ಗುಡಿಸಾಗರ, ಚಂದ್ರಹಾಸ ಇಲ್ಲೂರ, ಗೋವಿಂದರಾಜ ಗುಡಿಸಾಗರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.