ನವದೆಹಲಿ: ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ನೇಪಾಳದ ಪ್ರಧಾನಿ ಬಾಲೆನ್ ಶಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ನೇಪಾಳದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗೆ 24 ಸಾವಿರ ಕೋಟಿ ನೇಪಾಳಿ ರೂಪಾಯಿ (ಸುಮಾರು 15 ಸಾವಿರ ಕೋಟಿ ಭಾರತೀಯ ರೂಪಾಯಿ) ಮೊತ್ತದ ಅಭಿವೃದ್ಧಿ ಸಹಕಾರ ಪ್ಯಾಕೇಜ್ ಘೋಷಿಸಿದ್ದಾರೆ.
ಮಾತುಕತೆಯ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನೇಪಾಳದ ಯುವ ಪ್ರಧಾನಿ ಬಾಲೆನ್ ಶಾ ಅವರ ಅಭಿವೃದ್ಧಿಯ ದೂರದೃಷ್ಟಿಯನ್ನು ಶ್ಲಾಘಿಸಿದರು. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಬಾಲೆನ್ ಶಾ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ ಎಂದರು.
ನೇಪಾಳದ ಜನರು ಬಾಲೆನ್ ಶಾ ಅವರಿಗೆ ನೀಡಿರುವ ಐತಿಹಾಸಿಕ ಜನಾದೇಶವು ಅಲ್ಲಿನ ಹೊಸ ಪೀಳಿಗೆಯ ಆಶಯ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತದೆ. ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಭಾಷಣದಲ್ಲಿಯೇ ಅವರ ದೂರದೃಷ್ಟಿಯ ಪರಿಚಯವಾಗಿದೆ ಎಂದು ಮೋದಿ ಹೇಳಿದರು.
ಭಾರತ ಮತ್ತು ನೇಪಾಳ ಕೇವಲ ನೆರೆಯ ರಾಷ್ಟ್ರಗಳಲ್ಲ. ಉಭಯ ದೇಶಗಳು ಆಳವಾದ ನಂಬಿಕೆ ಮತ್ತು ಸ್ನೇಹದ ಸಂಬಂಧವನ್ನು ಹೊಂದಿವೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಅವರು, ದೇಶದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವ ಉದ್ದೇಶದಿಂದ 24 ಸಾವಿರ ಕೋಟಿ ನೇಪಾಳಿ ರೂಪಾಯಿಗಳ ಅಭಿವೃದ್ಧಿ ಸಹಕಾರ ಪ್ಯಾಕೇಜ್ ಘೋಷಿಸುತ್ತಿರುವುದಾಗಿ ತಿಳಿಸಿದರು.
ಭಾರತದ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ (Neighbourhood First) ನೀತಿಯಡಿ ನೇಪಾಳಕ್ಕೆ ಅಗತ್ಯ ನೆರವು ನೀಡಲಾಗುತ್ತಿದೆ. ಈ ವರ್ಷ ತೈಲ ಪೂರೈಕೆಗೆ ಸಂಬಂಧಿಸಿದ ಸವಾಲುಗಳ ನಡುವೆಯೂ ನೇಪಾಳಕ್ಕೆ ಇಂಧನ, ರಸಗೊಬ್ಬರ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲಾಗಿದೆ ಎಂದು ಮೋದಿ ವಿವರಿಸಿದರು.
ಇದೇ ವೇಳೆ ಮಾತನಾಡಿದ ನೇಪಾಳ ಪ್ರಧಾನಿ ಬಾಲೆನ್ ಶಾ, ಭಾರತ ನೀಡಿದ ಆತ್ಮೀಯ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇಪಾಳಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಭಾರತ ಮತ್ತು ನೇಪಾಳದ ನಡುವಿನ ಸಂಬಂಧವು ಹಿಮಾಲಯದಷ್ಟು ದೃಢವಾಗಿದ್ದು, ಸಾಗರದಷ್ಟು ವಿಶಾಲವಾಗಿದೆ. ಉಭಯ ದೇಶಗಳ ಆತ್ಮೀಯತೆಯನ್ನು ಕೇವಲ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನೈಸರ್ಗಿಕ ವಿಕೋಪಗಳು ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಭಾರತವು ನಂಬಿಕಸ್ತ ನೆರೆಯ ರಾಷ್ಟ್ರವಾಗಿ ಮೊದಲ ಪ್ರತಿಸ್ಪಂದಕನಾಗಿ ನೆರವು ನೀಡಿದೆ. ಇದಕ್ಕಾಗಿ ಭಾರತ ಸರ್ಕಾರ ಮತ್ತು ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬಾಲೆನ್ ಶಾ ಹೇಳಿದರು.
ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ಮತ್ತು ನೇಪಾಳದ ನಡುವೆ ಒಟ್ಟು ಎಂಟು ತಿಳುವಳಿಕೆ ಪತ್ರಗಳಿಗೆ (MoU) ಸಹಿ ಹಾಕಲಾಯಿತು. ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ, ಬಾಹ್ಯಾಕಾಶ ಸಂಶೋಧನೆ, ಆರೋಗ್ಯ ಮತ್ತು ಔಷಧ, ನಗರಾಭಿವೃದ್ಧಿ, ಆಯುರ್ವೇದ ಹಾಗೂ ಸಾಂಪ್ರದಾಯಿಕ ಔಷಧ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇದರಲ್ಲಿ ಸೇರಿವೆ.
ಇದರೊಂದಿಗೆ ಉಭಯ ನಾಯಕರು ಪ್ರಮುಖ ಸಂಪರ್ಕ ಮತ್ತು ಇಂಧನ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಿದರು. ಹೊಸ ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಈ ಬೆಳವಣಿಗೆ ಭಾರತ ಮತ್ತು ನೇಪಾಳ ನಡುವಿನ ಆರ್ಥಿಕ ಹಾಗೂ ಅಭಿವೃದ್ಧಿ ಸಹಕಾರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.










