ವಿಜಯಸಾಕ್ಷಿ ಸುದ್ದಿ, ಚಿತ್ತಾಪುರ : ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಇನ್ನಷ್ಟು ಆದರ್ಶ ಚಿಂತನೆಗಳು ಬೆಳೆಯಬೇಕು. ಆದರೆ ಸಮಾಜದ ಹಲವಾರು ರಂಗಗಳಲ್ಲಿ ಅನಾರೋಗ್ಯಕರ ವಾತಾವರಣ ಹೆಚ್ಚು ಬೆಳೆಯುತ್ತಿದೆ. ಆದ್ದರಿಂದ ಗುರುಕುಲ ಮಾದರಿ ಶಿಕ್ಷಣದಿಂದ ನೈತಿಕ ಮೌಲ್ಯಗಳು ಪುನರುತ್ಥಾನಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸುಪ್ರಸಿದ್ಧ ಸನ್ನತಿ ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಸಂಯೋಜಿಸಿದ ಶ್ರೀ ಗುರು ಸೋಮೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಗುರುಕುಲ ಸಂಘದಿಂದ ಜರುಗಿದ ವೈದಿಕ ಮತ್ತು ಜ್ಯೋತಿಷ್ಯ ಕಾರ್ಯಾಗಾರ ಶಿಬಿರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಸರಿಸಾಟಿಯಾದುದು ಇನ್ನೊಂದಿಲ್ಲ. ಪ್ರಾಚೀನ ಕಾಲದಲ್ಲಿ ಆಚಾರ್ಯರು ಮತ್ತು ಋಷಿಮುನಿಗಳು ಗುರುಕುಲ ಸ್ಥಾಪಿಸಿ ತನ್ಮೂಲಕ ಆಧ್ಯಾತ್ಮ ಜ್ಞಾನದ ಅರಿವನ್ನು ಬೆಳೆಸಿಕೊಂಡು ಬರುತ್ತಿದ್ದರು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಗುರುಕುಲ ಮಾದರಿ ಶಿಕ್ಷಣ ಜನರ ಜೀವನ ಮಟ್ಟವನ್ನು ಹೆಚ್ಚಿಸುತ್ತಿತ್ತು. ಆದರೆ ಇಂದು ಅತ್ಯಾಧುನಿಕ ಶಿಕ್ಷಣ ಬೆಳೆದರೂ ಬದುಕಿಗೆ ನೆಮ್ಮದಿ ತೃಪ್ತಿ ಸಾಮರಸ್ಯ ಉಂಟು ಮಾಡುವ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ದಿಗ್ಗಾವಿ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳು ಮತ್ತು ಮಳಖೇಡ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಗುರು ಪರಂಪರೆಯ ಮಹತ್ವವನ್ನು ಭಕ್ತರಿಗೆ ತಿಳಿಸಿದರು. ಸನ್ನತಿ ರೇವಣಸಿದ್ಧಯ್ಯ ಶಾಸ್ತಿçಗಳು ನಿರೂಪಿಸಿದರು.
ಸನ್ನತಿ ಸಮಾರಂಭಕ್ಕೂ ಮುನ್ನ ದಿಗ್ಗಾವಿ ಗ್ರಾಮಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿ ಶ್ರೀ ಶಂಭುಲಿಂಗೇಶ್ವರ ತೇರಿನ ಪಾದಗಟ್ಟಿ ಪ್ರತಿಷ್ಠಾಪನೆ ನೆರವೇರಿಸಿ ಸೇರಿದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
Advertisement