ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್ (FDTL), ಹವಾಮಾನ ಮತ್ತು ತಾಂತ್ರಿಕ ದೋಷಗಳಿಂದಾಗಿ 73 ಇಂಡಿಗೋ ವಿಮಾನಗಳು ರದ್ದಾಗಿವೆ ಅಥವಾ ವಿಳಂಬವಾಗಿವೆ. ಇದರಿಂದ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ನಡೆಯಿತು.
ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 4ರಂದು ಇಂಡಿಗೋ ವಿಮಾನಯಾನ ಸಂಸ್ಥೆಯ 73 ವಿಮಾನಗಳ ಹಾರಾಟ ರದ್ದಾಗಿದೆ. 41 ಆಗಮನ ಮತ್ತು 32 ನಿರ್ಗಮನ ವಿಮಾನಗಳ ಹಾರಾಟದ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಏಕಾಏಕಿ ವಿಮಾನ ಹಾರಾಟ ರದ್ದಾಗಿರುವುದರಿಂದ ಪ್ರಯಾಣಿಕರು ಕಂಗಾಲಾಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏರ್ಪೋರ್ಟ್ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ವಾಗ್ವಾದದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಡಿಸೆಂಬರ್ 2ರಂದು 20 ವಿಮಾನ, ನಿನ್ನೆ 62 ವಿಮಾನಗಳ ಹಾರಾಟ ರದ್ದಾಗಿತ್ತು. ಇಂದೂ ಸಹ 73 ವಿಮಾನಗಳ ಹಾರಾಟ ರದ್ದಾಗಿರುವ ಬಗ್ಗೆ ಮಾಹಿತಿ ದೊರೆತಿದೆ.
ಇನ್ನೂ ಈ ಬಗ್ಗೆ ವರದಿಗಳು ಹರಿದಾಡುತ್ತಿದ್ದಂತೆ, ಇಂಡಿಗೋ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಕಳೆದ ಎರಡು ದಿನಗಳಿಂದ ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಪ್ರಯಾಣಿಕರಿಗೆ ಉಂಟಾದ ಅಸೌಕರ್ಯಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ.



