ವಿಜಯಸಾಕ್ಷಿ ಸುದ್ದಿ, ನರೇಗಲ್ : ಸಂಘಟನೆಯಿಂದ ಏನೆಲ್ಲವನ್ನೂ ಸಾಧಿಸಬಹುದು. ಶೂನ್ಯದಿಂದ ಸ್ವರ್ಗವನ್ನೇ ನಿರ್ಮಾಣ ಮಾಡಬಹುದು ಎಂಬುದನ್ನು ನರೇಗಲ್ಲದ ಆರ್ಯವೈಶ್ಯ ಸಮಾಜ ಸಾಧಿಸಿ ತೋರಿಸಿದೆ. ಈ ಮೂಲಕ ಅದು ಇತರರಿಗೆ ಮಾದರಿಯಾಗಿದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ನೂತನ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ, ಧರ್ಮ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ದೇವಸ್ಥಾನಗಳನ್ನು ನಿರ್ಮಿಸಿದರೆ ಸಾಲದು. ಅದನ್ನು ನಿರ್ವಹಣೆ ಮಾಡುವ ಕಾರ್ಯ ಅತ್ಯಂತ ಕಠಿಣದ್ದಾಗಿದೆ. ಆದರೆ ಆರ್ಯವೈಶ್ಯ ಸಮಾಜದವರು ಈ ದಿಶೆಯಲ್ಲಿ ಯಾವಾಗಲೂ ಭಕ್ತಿಭಾವವನ್ನು ಹೊಂದಿರುವುದರಿಂದ ದೇವಸ್ಥಾನದ ನಿರ್ವಹಣೆಗೂ ಯಾವ ತೊಂದರೆ ಬರದು ಎಂದು ಅವರು ಅಭಿಪ್ರಾಯಪಟ್ಟರು.
ಉದ್ಯಮಿ ಶಿವಾನಂದ ಕಂಪ್ಲಿ ಮಾತನಾಡಿ, ಎಲ್ಲರೂ ಒಮ್ಮನದಿಂದ ಶ್ರಮಿಸಿ, ಪರ ಸ್ಥಳದ ಎಲ್ಲರೂ ಕೈ ಜೋಡಿಸಿದ್ದರಿಂದ ಈ ದೇವಸ್ಥಾನ ನಿರ್ಮಾಗೊಂಡಿದೆ. ಇದನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಇಲ್ಲಿನ ಎಲ್ಲ ನಾಗರಿಕರ ಮೇಲಿದೆ. ಈ ದೇವಸ್ಥಾನದಲ್ಲಿ ಭಜನೆ, ಜಪ-ತಪ, ಪ್ರವಚನ ಇತ್ಯಾದಿಗಳು ವರ್ಷದುದ್ದಕ್ಕೂ ನಡೆಯುವಂತಾಗಲಿ ಎಂದು ಅವರು ಹಾರೈಸಿದರು.
ಮೂರ್ತಿಗಳನ್ನು ನಿರ್ಮಿಸಿಕೊಟ್ಟ ಶಿಲ್ಪಿ ಸದಾಶಿವ ಶೆಣೈ ಮಾತನಾಡಿ, ಮೂರ್ತಿಗಳು ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟಿವೆ ಎಂದು ಎಲ್ಲರೂ ಹೇಳುತ್ತೀರಿ. ಇದಕ್ಕೆ ಆ ಪರಮೇಶ್ವರನ ಅನುಗ್ರಹವೇ ಕಾರಣ ಹೊರತು, ವೈಯಕ್ತಿಕವಾಗಿ ನನ್ನದೇನಿಲ್ಲ ಎಂದರು.
ಸಭೆಯನ್ನುದ್ದೇಶಿಸಿ ಗದಗ ಬಾಲಾಜಿ ಶಾಮಿಯಾನದ ಮಾಲೀಕ ಎನ್.ರಾಮರಾವ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ, ಗುರುರಾಜ ಕುಲಕರ್ಣಿ ಮುಂತಾದವರು ಮಾತನಾಡಿದರು. ವೇದಿಕೆಯ ಮೇಲೆ ಕಾಳಿಕಾ ದೇವಸ್ಥಾನದ ಅಧ್ಯಕ್ಷ ನಾರಾಯಣ ವಡ್ಡಟ್ಟಿ, ಸುರೇಶ ಗುಡಿಸಾಗರ, ಚಂದ್ರಹಾಸ ಇಲ್ಲೂರ, ಉದ್ಯಮಿ ಗೋವಿಂದರಾ ಜ ಗುಡಿಸಾಗರ, ಇಂಜಿನಿಯರ್ ಭಾರತಿ ಧರ್ಮಾಯತ ಮುಂತಾದವರಿದ್ದರು.
ಅಧ್ಯಕ್ಷತೆ ವಹಿಸಿದ್ದ ರಾಮಚಂದ್ರಪ್ಪ ನವಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ವೀರಭದ್ರ ಇಲ್ಲೂರ ಸ್ವಾಗತಿಸಿದರು. ರಾಘವೇಂದ್ರ ಕಾಲವಾಡ ನಿರೂಪಿಸಿದರು. ಸುರೇಶ ನವಲಿ ವಂದಿಸಿದರು.
ಶ್ರೀ ಕನ್ಯಕಾ ಪರಮೇಶ್ವರಿಯು ಪಾರ್ವತಿಯ ಇನ್ನೊಂದು ರೂಪವಾಗಿದ್ದು, ಆ ದೇವಿಯ ಸ್ತುತಿಯನ್ನು ಮಾಡುವದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಪ್ರತಿಷ್ಠಾಪಿತ ಮೂರ್ತಿಗಳು ಒಂದು ಸಂದೇಶವನ್ನು ನೀಡುತ್ತಿದ್ದು, ಅವುಗಳನ್ನು ಅರ್ಥ ಮಾಡಿಕೊಂಡು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ನಾವು ಮನಸ್ಸಿನ ನೆಮ್ಮದಿಯನ್ನು ಪಡೆಯಬಹುದು ಎಂದು ಶ್ರೀಗಳು ಹೇಳಿದರು.