ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ರಜಾ ದಿನಗಳ ಮಜಾ ಅನುಭವಿಸಲು ಮಕ್ಕಳಿಗೆ ಉಚಿತವಾಗಿ 10 ದಿನಗಳ ಪರ್ಯಂತ ಶ್ಲೋಕ, ವಚನಗಳು, ನೀತಿ ಕತೆ, ಯೋಗ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಯಿತು.
ಸಂಚಾಲಕಿ ಬಿ.ಕೆ. ಸವಿತಕ್ಕ ಮಕ್ಕಳನ್ನುದ್ದೇಶಿಸಿ ಮಾತನಾಡಿ, ಮಕ್ಕಳ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಅವರಲ್ಲಿರುವ ಸುಪ್ತ ಪ್ರತಿಭಯನ್ನು ಹೊರಹಾಕಲು ಮಕ್ಕಳಿಗೆ ಇಂತಹ ತರಬೇತಿಗಳನ್ನು ಬೇಸಿಗೆ ರಜಾ ದಿನಗಳಲ್ಲಿ ನಡೆಸಲಾಗುತ್ತದೆ. ಶೈಕ್ಷಣಿಕ ಪ್ರಗತಿಯೊಂದಿಗೆ ಬೌದ್ಧಿಕವಾಗಿಯೂ ಪ್ರಬುದ್ಧತೆ ಹೊಂದಲು ಶಿಕ್ಷಕ ಮತ್ತು ಪಾಲಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಬೇಸಿಗೆ ರಜೆಯಲ್ಲಿ ತಿಂಗಳ ಪರ್ಯಂತರ ಕಾಲಹರಣ ಮಾಡುವ ಬದಲು ಮಕ್ಕಳಿಗೆ ಇಂತಹ ಚಟುವಟಿಕೆಗಳ ಮೂಲಕ ಪ್ರೋತ್ಸಾಹಿಸಿ ಪೋಷಿಸುವುದೇ ನಮ್ಮ ಸಂಸ್ಥೆಯ ಆದ್ಯತೆಯಾಗಿದೆ. ಇದಕ್ಕೆ ಪಾಲಕರೂ ಸಹ ಆದ್ಯತೆ ನೀಡುವದರಿಂದ ಮಕ್ಕಳು ಬೌದ್ಧಿಕವಾಗಿ ವಿಕಾಸ ಹೊಂದಲು ಕಾರಣವಾಗಲಿದೆ ಎಂದು ತಿಳಿಸಿದರು.