ವಿಜಯಸಾಕ್ಷಿ ಸುದ್ದಿ, ಗದಗ : ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಹಮ್ಮಿಕೊಳ್ಳುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ, ಸುವ್ಯವಸ್ಥಿತವಾಗಿ ಹಮ್ಮಿಕೊಂಡು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರನ್ಸ್ ಹಾಲ್‌ನಲ್ಲಿ ಶುಕ್ರವಾರ ಜರುಗಿದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಜರುಗುತ್ತಿದ್ದು,ಗದಗ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ತಾಲೂಕಿನಲ್ಲಿ ಮಾನವ ಸರಪಳಿ ಹಾದು ಹೋಗಲಿದೆ. ಪ್ರತಿ ಕಿಲೋಮೀಟರ್‌ಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಅಂದು ಬೆಳಿಗ್ಗೆ 9.30ಕ್ಕೆ ಎಲ್ಲರೂ ಸರದಿ ಸಾಲಿನಲ್ಲಿ ನಿಂತ ನಂತರ ನಾಡಗೀತೆ ಹಾಡುವುದು, ಸಂವಿಧಾನ ಪೀಠಿಕೆ ಓದುವುದು, ನಂತರ ಮಾನವ ಸರಪಳಿ ಕಾರ್ಯಕ್ರಮ ಜರುಗಲಿದೆ ಎಂದರು.
ಆಯಾ ತಾಲೂಕಿನ ತಹಸೀಲ್ದಾರರು ಮತ್ತು ತಾ.ಪಂ ಕಾರ್ಯನಿರ್ವಾಹಕರು ಒಳಗೊಂಡು ಸೂಕ್ಷ್ಮ ಯೋಜನೆ ತಯಾರಿಸಿ ಮಾನವ ಸರಪಳಿ ಹಾದುಹೋಗುವ ಗ್ರಾಮ ಸ್ಭೆರಿದಂತೆ 10 ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಗ್ರಾಮಸಭೆಯನ್ನು ನಡೆಸಬೇಕು. ಸದರಿ ಕಾರ್ಯಕ್ರಮದ ಕುರಿತು ಡಂಗುರ ಸಾರಬೇಕು ಹಾಗೂ ಕಾರ್ಯಕ್ರಮದ ದಿನದಂದು ಮಾನವ ಸರಪಳಿ ಹಾದುಹೋಗುವ 10 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲ ಸರಕಾರಿ ಶಾಲೆಗಳಲ್ಲಿ ಬಿಸಿ ಊಟದ ವ್ಯವಸ್ಥೆ ಮಾಡಿಸಬೇಕು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸೀಲ್ದಾರರು, ಪಿಡಿಓ, ನರೇಗಾ, ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಗಳು ಅವಶ್ಯಕ ಪೂರ್ವಸಿದ್ದತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮುಂಡರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಮಾನವ ಸರಪಳಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯಕ್ರಮ ಸ್ಥಳದಲ್ಲಿ ಸ್ವಚ್ಛತೆ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವತ್ತ ಗಮನ ಹರಿಸಬೇಕೆಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಮಾತನಾಡಿ, ಪೊಲೀಸ್ ಇಲಾಖೆಯ ಪಿಎಸ್‌ಐ, ಡಿವಾಯ್‌ಎಸ್‌ಪಿ ಮತ್ತು ಸಂಚಾರಿ ಪೊಲೀಸ್ ಸಿಬ್ಬಂದಿಗಳು ಕಾರ್ಯನಿವಹಿಸಿ ಮಾನವ ಸರಪಳಿಗೆ ಸಂಪೂರ್ಣ ಬಂದೋಬಸ್ತ್ ಒದಗಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಲ್. ಬಾರಟಕ್ಕಿ, ವಿವಿಧ ತಾಲೂಕಿನ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಮಾನವ ಸರಪಳಿಯ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಡಿಕೊಳ್ಳಬೇಕು. ಮಾನವ ಸರಪಳಿಯ ನೋಂದಣಿಗೆ ತಮ್ಮ ಕುಟುಂಬದ ಸದಸ್ಯರು, ನೆರೆಹೊರೆಯವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ https://www.democracydaykarnataka.in/registration ನಲ್ಲಿ ಆನ್‌ಲೈನ್ ರೆಜಿಸ್ಟ್ರೇಶನ್ ಮಾಡಿಸಿ ಜಿಲ್ಲೆಗೆ ಉತ್ತಮ ಸ್ಥಾನ ತರಬೇಕು ಎಂದು ತಿಳಿಸಿದರು.
ತಾಲೂಕಿನ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ಹಾದು ಹೋಗುವಾಗ ವಾಹನ ದಟ್ಟಣೆ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನವಹಿಸಿ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿರ್ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡು ಮಾನವ ಸರಪಳಿಯ ಪ್ರಾರಂಭ ಮತ್ತು ಅಂತ್ಯ ಸ್ಥಳವನ್ನು ಗುರುತಿಸಬೇಕು ಎಂದು ಡಿಸಿ ಗೋವಿಂದರೆಡ್ಡಿ ಸೂಚಿಸಿದರು.