ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಮಾ.12ರಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.
ಅವರು ಶನಿವಾರ ಈ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿವರ್ಷ ಪಂಚಮಸಾಲಿ ಸಮಾಜದ ತಾಲೂಕಾ ಘಟಕದಿಂದ ಮಹಿಳಾ ದಿನಾಚರಣೆಯನ್ನು ಪಟ್ಟಣದ ವೀರಭದ್ರೇಶ್ವರ ಹೋಟೆಲ್ ಆವರಣದಲ್ಲಿ ಸಂಜೆ 4ಕ್ಕೆ ವಿಶೇಷವಾಗಿ ಆಚರಿಸಲಾಗುತ್ತಿದೆ. ಸಮಾಜದ ಹರಿಹರ ಪೀಠದ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳ ಸಾನಿಧ್ಯ ವಹಿಸುವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು ಜಯಶ್ರೀ ಅಮರಪ್ಪ ಗುಡಗುಂಟಿ ಅವರಿಗೆ `ಸುಕೃತಿಮಾ’ ಪ್ರಶಸ್ತಿ ನೀಡಲಾಗುವುದು.
ಅಧ್ಯಕ್ಷತೆಯನ್ನು ಸುನೀತಾ ಮಂಜುನಾಥ ಮಾಗಡಿ ವಹಿಸಲಿದ್ದಾರೆ. ಸಮಾಜದ ರಾಜ್ಯ ಉಪಾಧ್ಯಕ್ಷೆ ವಸಂತಾ ಹುಲ್ಲತ್ತಿ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಧಕ ಕೃಷಿ ಮಹಿಳೆ ರಾಜೇಶ್ವರಿ ಪಾಟೀಲ ಉಪನ್ಯಾಸ ನೀಡಲಿದ್ದಾರೆ. ತಾಯಿ-ಮಗಳ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅವರಿಬ್ಬರ ಅನ್ಯೋನ್ಯತೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ `ನನ್ನಮ್ಮ ಸೂಪರ್ ಸ್ಟಾರ್’ ಎಂಬ ವಿಶೇಷ ಕಾರ್ಯಕ್ರಮವನ್ನು ಸುಧಾ ಹುಚ್ಚಣ್ಣವರ ಉದ್ಘಾಟಿಸಲಿದ್ದಾರೆ. ಪುರಸಭೆ ಮಾಜಿ ಅದ್ಯಕ್ಷೆ ಜಯಮ್ಮ ಅಂದಲಗಿ, ವಕೀಲೆ ನಂದಾ ಅಮಾಸಿ ಸೇರಿ ಅನೇಕರು ಆಗಮಿಸುವರು ಎಂದು ಹೇಳಿದರು.
ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಕಾರ್ಯಕ್ರಮದ ರೂಪರೇಷೆಗಳನ್ನು ವಿವರಿಸಿದರು. ಸಮಾಜದ ಹಿರಿಯರಾದ ಡಿ.ಬಿ. ಬಳಿಗಾರ, ಎಸ್.ಎಫ್. ಆದಿ, ಶಿವನಗೌಡ ಅಡರಕಟ್ಟಿ, ಮಲ್ಲೇಶಪ್ಪ ಕಣವಿ, ಶಿವಾನಂದ ಬನ್ನಿಮಟ್ಟಿ, ಮಲ್ಲಿಕಾರ್ಜುನ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ಚಂದ್ರು ಮಾಗಡಿ, ಬಸವರಾಜ ಕಲ್ಲೂರ, ಬಸಣ್ಣ ಬಾಳಿಕಾಯಿ, ಜುಂಜನಗೌಡ ನರಸಮ್ಮನವರ ಇದ್ದರು.