ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಅದ್ದೂರಿ ಜಾತ್ರೆಯನ್ನು ಕಣ್ಮುಂಬಿಕೊಳ್ಳಲು ಪ್ರತಿ ವರ್ಷ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಈಬಾರಿಯ ಗವಿಸಿದ್ದೇಶ್ವರ ಜಾತ್ರೆಗೆ ಅಮಿತಾಭ್ ಬಚ್ಚನ್ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಈಗಾಗಲೇ ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿ ಅಮಿತಾಭ್ ಗೆ ಆಹ್ವಾನ ಪತ್ರ ನೀಡಿದೆ.
ಗವಿಸಿದ್ದೇಶ್ವರ ಮಠದ ಆಡಳಿತ ಮಂಡಳಿಯವರು ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಪ್ರೀತಿಯಿಂದ ಆಮಂತ್ರಣ ಪತ್ರಿಕೆ ಸ್ವೀಕರಿಸಿ ಈ ಅಮಿತಾಭ್ ಬಚ್ಚನ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಅವರು ಈ ಜಾತ್ರೆಗೆ ಬರೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗವಿಸಿದ್ದೇಶ್ವರ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭ ಮೇಳ ಎಂದೆ ಖ್ಯಾತಿ ಪಡೆದಿದೆ. ಜನವರಿ 15ರಂದು ಈ ಜಾತ್ರೆ ನಡೆಯಲಿದೆ. ಒಂದೊಮ್ಮೆ ಅಮಿತಾಭ್ ಬಚ್ಚನ್ ಜಾತ್ರೆಗೆ ಆಗಮಿಸಿದರೆ ಇದರ ಮೆರಗು ಮತ್ತಷ್ಟು ಹೆಚ್ಚಲಿದೆ.
ಪ್ರತಿ ವರ್ಷವೂ ಗವಿಸಿದ್ದೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರುತ್ತದೆ. ಲಕ್ಷಾಂತರ ಮಂದಿ ಜಾತ್ರೆಗೆ ಆಗಮಿಸುತ್ತಾರೆ. ಬರುವ ಎಲ್ಲಾ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ. ಅನ್ನ ದಾಸೋಹವನ್ನು ಮಠದ ವತಿಯಿಂದಲೇ ನೆರವೇರಿಸಲಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಅನ್ನೋದು ವಿಶೇಷ.