ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ನಡೆದ ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ಓರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಮಣಿಸಿದ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿತು. ಆರ್ಸಿಬಿ ಪರ ವಿರಾಟ್ ಕೊಹ್ಲಿ ಕೂಡ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆದರೆ ಈ ಪಂದ್ಯದಲ್ಲಿ ಭದ್ರತಾ ಲೋಪ ಎಸಗಿದ ಕಿಂಗ್ ಕೊಹ್ಲಿಯ ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಸೆಕ್ಷನ್ 329 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ನೀಡಿದ 175 ರನ್ಗಳ ಬೆನ್ನಟ್ಟಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 13 ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಅರ್ಧಶತಕ ಪೂರೈಸಿದ ತಕ್ಷಣ, ಅವರ ಅಭಿಮಾನಿಯೊಬ್ಬರು ಬ್ಯಾರಿಕೇಡ್ ಅನ್ನು ಮುರಿದು ಮೈದಾನಕ್ಕೆ ಪ್ರವೇಶಿಸಿದರು. ಕೊಹ್ಲಿ ಇರುವ ಕಡೆಗೆ ಓಡಿ ಬಂದ ಆತ, ಕೊಹ್ಲಿಯ ಕಾಲಿಗೆ ಬಿದ್ದು, ಆ ನಂತರ ಅವರನ್ನು ಅಪ್ಪಿಕೊಂಡನು. ಆದರೆ, ಅಷ್ಟೊತ್ತಿಗೆ ಭದ್ರತಾ ಸಿಬ್ಬಂದಿ ಬಂದು ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದಿದ್ದರು.
ಮೈದಾನದಲ್ಲಿ ಭದ್ರತಾ ಲೋಪವನ್ನು ಎಸಗಿ ಕೊಹ್ಲಿಯನ್ನು ತಬ್ಬಿಕೊಂಡಿದ್ದ ಅಭಿಮಾನಿಯನ್ನು ಕೋಲ್ಕತ್ತಾ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.