HomeSports NewsIPL 2026: ಗಿಲ್-ಸುದರ್ಶನ್ ಜೋಡಿಯ ಅಬ್ಬರಕ್ಕೆ ಗೇಲ್-ಕೊಹ್ಲಿ ದಾಖಲೆ ನುಚ್ಚುನೂರು!

IPL 2026: ಗಿಲ್-ಸುದರ್ಶನ್ ಜೋಡಿಯ ಅಬ್ಬರಕ್ಕೆ ಗೇಲ್-ಕೊಹ್ಲಿ ದಾಖಲೆ ನುಚ್ಚುನೂರು!

For Dai;y Updates Join Our whatsapp Group

Spread the love

ಚಂಡೀಗಢ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್ ತಂಡ ಮೂರನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. ಆದರೆ ಈ ಗೆಲುವಿಗಿಂತಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರ ಅಮೋಘ ಆರಂಭಿಕ ಜೊತೆಯಾಟ.

ರಾಜಸ್ಥಾನ್ ನೀಡಿದ್ದ 215 ರನ್‌ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಪರ ಇನ್ನಿಂಗ್ಸ್ ಆರಂಭಿಸಿದ ಗಿಲ್ ಮತ್ತು ಸುದರ್ಶನ್ ಮೊದಲ ವಿಕೆಟ್‌ಗೆ 167 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತಮ್ಮ 11ನೇ ಶತಕದ ಜೊತೆಯಾಟ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕೊಹ್ಲಿ-ಗೇಲ್ ದಾಖಲೆಯನ್ನು ಹಿಂದಿಕ್ಕಿದ ಜೋಡಿ

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ನಡೆಸಿದ ಜೋಡಿ ಎಂಬ ದಾಖಲೆಯನ್ನು ಇದೀಗ ಗಿಲ್ ಮತ್ತು ಸಾಯಿ ಸುದರ್ಶನ್ ತಮ್ಮದಾಗಿಸಿಕೊಂಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟಗಳು

  1. ಶುಭಮನ್ ಗಿಲ್ – ಸಾಯಿ ಸುದರ್ಶನ್: 11 ಶತಕದ ಜೊತೆಯಾಟ (48 ಇನ್ನಿಂಗ್ಸ್)
  2. ಕ್ರಿಸ್ ಗೇಲ್ – ವಿರಾಟ್ ಕೊಹ್ಲಿ: 10 ಶತಕದ ಜೊತೆಯಾಟ (63 ಇನ್ನಿಂಗ್ಸ್)
  3. ಬಾಬರ್ ಆಜಂ – ಮೊಹಮ್ಮದ್ ರಿಜ್ವಾನ್: 10 ಶತಕದ ಜೊತೆಯಾಟ (75 ಇನ್ನಿಂಗ್ಸ್)
  4. ಎಬಿ ಡಿವಿಲಿಯರ್ಸ್ – ವಿರಾಟ್ ಕೊಹ್ಲಿ: 10 ಶತಕದ ಜೊತೆಯಾಟ (77 ಇನ್ನಿಂಗ್ಸ್)
  5. ಅಭಿಷೇಕ್ ಶರ್ಮಾ – ಪ್ರಭ್ಸಿಮ್ರನ್ ಸಿಂಗ್: 10 ಶತಕದ ಜೊತೆಯಾಟ (ದೇಶೀಯ ಟಿ20 ಕ್ರಿಕೆಟ್)

ಇದಲ್ಲದೆ, ಮೊದಲ ವಿಕೆಟ್‌ಗೆ 100ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ಎಂಟು ಬಾರಿ ನಿರ್ಮಿಸಿದ ಸಾಧನೆಯನ್ನು ಗಿಲ್-ಸುದರ್ಶನ್ ಜೋಡಿ ಮಾಡಿದೆ. ಈ ಹಿಂದೆ ಈ ದಾಖಲೆ ಪಾಕಿಸ್ತಾನದ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿತ್ತು.

ಐಪಿಎಲ್ ಪ್ಲೇಆಫ್‌ನಲ್ಲೂ ಹೊಸ ದಾಖಲೆ

167 ರನ್‌ಗಳ ಜೊತೆಯಾಟದ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟದ ದಾಖಲೆಯನ್ನೂ ಈ ಜೋಡಿ ತಮ್ಮ ಹೆಸರಿಗೆ ಬರೆದುಕೊಂಡಿದೆ.

ಐಪಿಎಲ್ ಪ್ಲೇಆಫ್‌ನಲ್ಲಿ ಅತ್ಯಧಿಕ ಜೊತೆಯಾಟಗಳು

  1. ಗಿಲ್ – ಸಾಯಿ ಸುದರ್ಶನ್ (ಜಿಟಿ vs ಆರ್‌ಆರ್, 2026 ಕ್ವಾಲಿಫೈಯರ್-2): 167 ರನ್
  2. ಮೈಕಲ್ ಹಸ್ಸಿ – ಮುರಳಿ ವಿಜಯ್ (ಸಿಎಸ್ಕೆ vs ಆರ್‌ಸಿಬಿ, 2011 ಫೈನಲ್): 159 ರನ್
  3. ಮೈಕಲ್ ಹಸ್ಸಿ – ಸುರೇಶ್ ರೈನಾ (ಸಿಎಸ್ಕೆ vs ಮುಂಬೈ, 2013 ಕ್ವಾಲಿಫೈಯರ್): ಅಜೇಯ 140 ರನ್
  4. ಗಿಲ್ – ಸಾಯಿ ಸುದರ್ಶನ್ (ಜಿಟಿ vs ಮುಂಬೈ, 2023 ಕ್ವಾಲಿಫೈಯರ್-2): 138 ರನ್
  5. ಮನ್ವಿಂದರ್ ಬಿಸ್ಲಾ – ಜಾಕ್ ಕಾಲಿಸ್ (ಕೆಕೆಆರ್ vs ಸಿಎಸ್ಕೆ, 2012 ಫೈನಲ್): 136 ರನ್

ರಾಜಸ್ಥಾನ್ ರಾಯಲ್ಸ್ ನೀಡಿದ್ದ 215 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಪರ ಗಿಲ್ ಮತ್ತು ಸುದರ್ಶನ್ ಕೇವಲ 77 ಎಸೆತಗಳಲ್ಲಿ 167 ರನ್ ಸೇರಿಸಿ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು.

ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಗಳಿಸಿ ಬ್ರಿಜೇಶ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ನಾಯಕ ಶುಭಮನ್ ಗಿಲ್ 53 ಎಸೆತಗಳಲ್ಲಿ 104 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಅವರನ್ನು ಜೋಫ್ರಾ ಆರ್ಚರ್ ಔಟ್ ಮಾಡಿದರೂ, ಆಗಲೇ ಪಂದ್ಯ ಗುಜರಾತ್ ಹಿಡಿತಕ್ಕೆ ಬಂದಿತ್ತು.

ಈ ಆರಂಭಿಕ ಜೋಡಿಯ ನಿರ್ಣಾಯಕ ಜೊತೆಯಾಟದ ನೆರವಿನಿಂದ ಗುಜರಾತ್ ಟೈಟಾನ್ಸ್ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿ ಫೈನಲ್‌ಗೆ ಲಗ್ಗೆ ಇಟ್ಟಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!