ಐಪಿಎಲ್ 2026ಕ್ಕೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಗ್ರೀನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ಕೆಕೆಆರ್ ಗೆಲುವು ಸಾಧಿಸಿದೆ.
ಕ್ಯಾಮರೂನ್ ಗ್ರೀನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬರೋಬ್ಬರಿ ₹25.20 ಕೋಟಿ ರೂ. ಮೊತ್ತ ನೀಡಿ ಖರೀದಿಸಿದೆ. ಈ ಮೂಲಕ ಗ್ರೀನ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ದಾಖಲೆ ತಮ್ಮದೇ ದೇಶದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿತ್ತು. 2024ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಸ್ಟಾರ್ಕ್ ಅವರನ್ನು ₹24.75 ಕೋಟಿ ರೂ. ನೀಡಿ ಖರೀದಿಸಿತ್ತು. ಆ ದಾಖಲೆಯನ್ನು ಇದೀಗ ಕ್ಯಾಮರೂನ್ ಗ್ರೀನ್ ಮುರಿದಿದ್ದಾರೆ.
ಕ್ಯಾಮರೂನ್ ಗ್ರೀನ್ ಐಪಿಎಲ್ನಲ್ಲಿ 29 ಪಂದ್ಯಗಳನ್ನಾಡಿದ್ದು, 153ರ ಸ್ಟ್ರೈಕ್ರೇಟ್ನಲ್ಲಿ 707 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳಿವೆ. ಬೌಲಿಂಗ್ನಲ್ಲೂ 16 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ 63 ಪಂದ್ಯಗಳಿಂದ 1 ಶತಕ, 8 ಅರ್ಧಶತಕಗಳ ನೆರವಿನಿಂದ 1334 ರನ್ಗಳಿಸಿದ್ದಾರೆ. ಬೌಲಿಂಗ್ನಲ್ಲಿ 28 ವಿಕೆಟ್ ಪಡೆದಿದ್ದಾರೆ.



