ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆ ಗಲ್ಫ್ ರಾಷ್ಟ್ರಗಳ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳು ರದ್ದಾಗಿದ್ದು, ದುಬೈ ಸೇರಿದಂತೆ ಯುಎಇ ಭಾಗಗಳಲ್ಲಿ ಅನೇಕರ ಕನ್ನಡಿಗರು ಸಂಕಷ್ಟಕ್ಕೊಳಗಾಗಿದ್ದಾರೆ.
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಪ್ರತಿದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಇದರ ಪರಿಣಾಮವಾಗಿ ಏರ್‌ಸ್ಪೇಸ್ ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಿಮಾನ ಹಾರಾಟ ಸ್ಥಗಿತಗೊಂಡಿದೆ.
ಈ ನಡುವೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 28ರಂದು ಬೆಂಗಳೂರಿಗೆ ವಾಪಸ್ಸಾಗಬೇಕಿದ್ದ ಡ್ರೋನ್ ಪ್ರತಾಪ್, ಸದ್ಯ ಅಬುಧಾಬಿ ವಿಮಾನ ನಿಲ್ದಾಣದಲ್ಲೇ ಇದ್ದಾರೆ. “ನಾವು ಇಂದು ರಾತ್ರಿ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಎಲ್ಲಾ ವಿಮಾನಗಳು ಕ್ಯಾನ್ಸಲ್ ಆಗಿವೆ. ಏರ್‌ಸ್ಪೇಸ್ ಸಂಪೂರ್ಣವಾಗಿ ಕ್ಲೋಸ್ ಮಾಡಿದ್ದಾರೆ. ಈಗ ಏರ್‌ಪೋರ್ಟ್‌ನಲ್ಲಿ ಕಾಯುವುದರ ಹೊರತು ಮಾರ್ಗವಿಲ್ಲ,” ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
ಬುರ್ಜ್ ಖಲೀಫಾ ಸಮೀಪದಿಂದ ವಿಡಿಯೋ ಹಂಚಿಕೊಂಡಿರುವ ಪ್ರತಾಪ್, “ನಗರದಲ್ಲಿ ಸಾಮಾನ್ಯ ದಿನಗಳಂತೆಯೇ ಸಂಚಾರ ಇದೆ. ಆದರೆ ಯುದ್ಧದ ಆತಂಕ ಜನರಲ್ಲಿ ಕಂಡು ಬರುತ್ತಿದೆ,” ಎಂದು ಹೇಳಿದ್ದಾರೆ.
ಸದ್ಯ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಸೇವೆ ಪುನರಾರಂಭವಾಗುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳ ವಿರುದ್ಧ ಇರಾನ್ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.



