ದುಬೈ: ಇರಾನ್ ಡ್ರೋನ್ ದಾಳಿಯಿಂದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ದುಬೈ ಅಧಿಕಾರಿಗಳ ಪ್ರಕಾರ, ಸೋಮವಾರ ದುಬೈ ವಿಮಾನ ನಿಲ್ದಾಣದ ಸಮೀಪದ ಇಂಧನ ಟ್ಯಾಂಕ್‌ಗೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯ ತಕ್ಷಣ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿವೆ. ದುಬೈ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ಕೂಡ ತಕ್ಷಣ ನಿಯೋಜಿಸಲಾಗಿದ್ದು, ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತಾ ಕ್ರಮಗಳ ಭಾಗವಾಗಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಎಮಿರೇಟ್ಸ್ ಏರ್‌ಲೈನ್ ಕೂಡ ಹಾರಾಟ ಸ್ಥಗಿತಗೊಂಡಿರುವುದನ್ನು ದೃಢಪಡಿಸಿದೆ ಎಂದು ವರದಿಗಳು ತಿಳಿಸಿವೆ. ಈ ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಗಾಯಗಳ ವರದಿ ಇಲ್ಲ ಎಂದು ದುಬೈ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದುಬೈ ಮಾಧ್ಯಮ ಕಚೇರಿಯ ಮಾಹಿತಿ ಪ್ರಕಾರ, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಇಂಧನ ಟ್ಯಾಂಕ್‌ಗಳಲ್ಲಿ ಒಂದರ ಮೇಲೆ ಡ್ರೋನ್ ದಾಳಿಯ ಪರಿಣಾಮ, ನಾಗರಿಕ ರಕ್ಷಣಾ ತಂಡಗಳು ತಕ್ಷಣ ಸ್ಪಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ.



