ಟೆಹ್ರಾನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿವೆ. ಯುದ್ಧ ಕೊನೆಗೊಳ್ಳಬೇಕಾದರೆ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಇರಾನ್ ಸ್ಪಷ್ಟಪಡಿಸಿದೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯದ ದೇಶಗಳ ಮೇಲೆ ನಡೆಯುತ್ತಿರುವ ದಾಳಿಗಳು ನಿಲ್ಲಬೇಕಾದರೆ ಮೂರು ಪ್ರಮುಖ ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು. ಎರಡನೆಯದಾಗಿ ಸಂಘರ್ಷದ ವೇಳೆ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು. ಮೂರನೆಯದಾಗಿ ಭವಿಷ್ಯದಲ್ಲಿ ಮತ್ತೆ ಆಕ್ರಮಣ ನಡೆಸುವುದಿಲ್ಲ ಎಂಬ ದೃಢವಾದ ಅಂತರರಾಷ್ಟ್ರೀಯ ಖಾತರಿಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.
ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ನಡೆದ ಮಾತುಕತೆಯಲ್ಲಿಯೂ ಈ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಇರಾನ್ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಯೋನಿಸ್ಟ್ ಆಡಳಿತ ಮತ್ತು ಅಮೆರಿಕ ಆರಂಭಿಸಿದ ಈ ಯುದ್ಧವನ್ನು ಕೊನೆಗೊಳಿಸಲು ಇದೇ ಏಕೈಕ ಮಾರ್ಗ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೂ ಮೊದಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಬೇಷರತ್ತಾಗಿ ಶರಣಾಗಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೆಜೆಶ್ಕಿಯಾನ್, ಅದು ಅಮೆರಿಕವನ್ನು ಸಮಾಧಿಗೆ ಕೊಂಡೊಯ್ಯುವ ಕನಸು ಮಾತ್ರ ಎಂದು ತಿರುಗೇಟು ನೀಡಿದ್ದರು.



