ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಮಸ್ಯೆ ಸಾಮಾನ್ಯವಾಗುತ್ತಿದ್ದು, ಮಕ್ಕಳು ಹಾಗೂ ವಯಸ್ಕರು ಇಬ್ಬರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇಲ್ಲದಿರುವುದು ಮತ್ತು ಜೀವನಶೈಲಿಯ ಅಸಮತೋಲನವೇ ಇದರ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.
ವೈದ್ಯಕೀಯ ಮಾನದಂಡದ ಪ್ರಕಾರ ದೇಹದ ಬಿಎಂಐ (BMI) 30 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಸ್ಥೂಲಕಾಯ ಎಂದು ಪರಿಗಣಿಸಲಾಗುತ್ತದೆ. ಅಧಿಕ ತೂಕವು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಅಸಮತೋಲನದ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದ ಅನೇಕ ಮಕ್ಕಳು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಮಕ್ಕಳಲ್ಲಿ ಅಧಿಕ ತೂಕ ಹೆಚ್ಚಾಗಲು ದೈಹಿಕ ಚಟುವಟಿಕೆಯ ಕೊರತೆಯೂ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮಕ್ಕಳನ್ನು ಪ್ರತಿದಿನ ಹೊರಗೆ ಹೋಗಿ ಆಟವಾಡುವಂತೆ ಪ್ರೋತ್ಸಾಹಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.
ಮಕ್ಕಳಿಗೆ ಆರೋಗ್ಯಕರ ಆಹಾರಗಳ ಬಗ್ಗೆ ಅರಿವು ಕಡಿಮೆ ಇರುವುದರಿಂದ ಜಂಕ್ ಫುಡ್ಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇದರ ಪರಿಣಾಮವಾಗಿ ಕ್ಯಾಲೋರಿ ಸೇವನೆ ಹೆಚ್ಚಾಗಿ ತೂಕವೂ ವೇಗವಾಗಿ ಹೆಚ್ಚಾಗುತ್ತದೆ. ಹೀಗಾಗಿ ಪೋಷಕರು ಮಕ್ಕಳ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ನೀಡುವತ್ತ ಗಮನಹರಿಸಬೇಕು.
ಇದೇ ವೇಳೆ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್ಟಾಪ್ ಮುಂತಾದ ಗ್ಯಾಜೆಟ್ಗಳ ಬಳಕೆ ಹೆಚ್ಚಾಗಿರುವುದರಿಂದ ಅನೇಕ ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಕಡಿಮೆ ಮಾಡಿದ್ದಾರೆ. ಗ್ಯಾಜೆಟ್ಗಳ ಮುಂದೆ ಹೆಚ್ಚು ಸಮಯ ಕಳೆಯುವುದು ಮಕ್ಕಳ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.
ಮಕ್ಕಳು ಸಮರ್ಪಕವಾಗಿ ನಿದ್ರೆ ಮಾಡಿದರೆ ದೇಹ ಚುರುಕಾಗಿರುತ್ತದೆ. ಉತ್ತಮ ಗುಣಮಟ್ಟದ ನಿದ್ರೆ ಮಕ್ಕಳಲ್ಲಿ ಟೈಪ್-2 ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.



