ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಬಳಿಕ ದೇಶಾದ್ಯಂತ ಚರ್ಚೆ ಸೃಷ್ಟಿಯಾಗಿದ್ದರೆ, ಇದೀಗ ಅದು ವಿವಾದದ ಕೇಂದ್ರಬಿಂದು ಆಗಿದೆ. ಟೀಸರ್ನಲ್ಲಿರುವ ಕೆಲ ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬ ಆರೋಪದೊಂದಿಗೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗದ ಮುಂದೆ ಅಧಿಕೃತ ದೂರು ದಾಖಲಿಸಿದೆ.
ಬೆಂಗಳೂರುದಲ್ಲಿರುವ ಮಹಿಳಾ ಆಯೋಗದ ಕಚೇರಿಗೆ ತೆರಳಿ ಟೀಸರ್ನಲ್ಲಿನ ವಿವಾದಾಸ್ಪದ ದೃಶ್ಯಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಆಗ್ರಹಿಸಲಾಗಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಗೈರಿನಲ್ಲಿ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ಸಲ್ಲಿಸಲಾಗಿದೆ. ಟೀಸರ್ ಕನ್ನಡ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿರುವ AAP, ರಾಜ್ಯ ಸರ್ಕಾರ ಟೀಸರ್ ರದ್ದುಪಡಿಸುವಂತೆ ನಿರ್ದೇಶನ ನೀಡಬೇಕು ಹಾಗೂ ಸೆನ್ಸಾರ್ ಮಂಡಳಿ ಕಡ್ಡಾಯವಾಗಿ ಈ ವಿಷಯ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದೆ.
ಈ ಕುರಿತು AAP ಮಹಿಳಾ ಘಟಕದ ಕಾರ್ಯದರ್ಶಿ ಉಷಾ ನೀಡಿದ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. “ಯಶ್ ಅವರು ‘ನಾನು ಮಾಡುವ ಸಿನಿಮಾ ಫ್ಯಾಮಿಲಿ ಜೊತೆ ಕುಳಿತು ನೋಡುವಂತಿರಬೇಕು’ ಎಂದು ಹೇಳುತ್ತಾರೆ. ಹಾಗಾದರೆ ಟೀಸರ್ನಲ್ಲಿರುವ ದೃಶ್ಯಗಳಲ್ಲಿ ಆ ಮೌಲ್ಯ ಎಲ್ಲಿದೆ? ಕನ್ನಡ ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದರೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಈ ರೀತಿಯ ಕಂಟೆಂಟ್ ಮೂಲಕ ಅಲ್ಲ” ಎಂದು ಅವರು ಕಟುವಾಗಿ ಹೇಳಿದ್ದಾರೆ.



