ಬೆವರಿನ ಹನಿ ಬದುಕಿನ ದಾರಿ ತೋರಿಸುತ್ತದೆ : ರಂಭಾಪುರಿ ಶ್ರೀಗಳು

0
Ishtalinga Mahapuja and public awareness ceremony
Spread the love

ವಿಜಯಸಾಕ್ಷಿ ಸುದ್ದಿ, ಕಡೂರು : ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಕಣ್ಣೀರಿನ ಹನಿ ಜೀವನದಲ್ಲಿ ಹೇಗಿರಬೇಕೆಂದು ಕಲಿಸಿದರೆ, ಧರ್ಮಾಚರಣೆ ಬದುಕಿನ ದಾರಿ ತೋರಿಸುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಆಸಂದಿ ಗ್ರಾಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಂಗಣದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಹಾಲು ಸ್ವಚ್ಛವಾಗಿದ್ದು, ಪಾತ್ರೆ ಸ್ವಚ್ಛ ಇರದಿದ್ದರೆ ಹಾಲು ಕೆಟ್ಟು ಹೋಗುತ್ತದೆ. ಮಾತು ಸ್ವಚ್ಛವಾಗಿದ್ದು ಮನಸ್ಸು ಸ್ವಚ್ಛ ಇರದಿದ್ದರೆ ಮಾತಿಗೆ ಬೆಲೆ ಇರುವುದಿಲ್ಲ. ಕಷ್ಟದಲ್ಲಿ ಜೊತೆಗಿದ್ದವರನ್ನು ಸುಖ ಬಂದಾಗ ಮರೆಯಬಾರದು.
ಬಂಗಾರವನ್ನು ಎಷ್ಟು ಚೂರು ಮಾಡಿದರೂ ಅದರ ಬೆಲೆ ಕಡಿಮೆಯಾಗುವುದಿಲ್ಲ. ಅದೇ ರೀತಿ ಒಳ್ಳೆತನದಿಂದ ಸಂಪಾದಿಸಿದ ಗೌರವ ಎಂದಿಗೂ ಮಾಸಿ ಹೋಗುವುದಿಲ್ಲ. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ರಂಭಾಪುರಿ ಪೀಠದ ಪರಮಾಚಾರ್ಯರು. ನೊಂದವರ, ಬೆಂದವರ ಧ್ವನಿಯಾಗಿ ಜನ ಸಮುದಾಯದಲ್ಲಿ ಸಂಸ್ಕಾರ ಪ್ರಜ್ಞೆಯನ್ನು ಬೋಧಿಸಿದ ಮಹಾಪುರುಷರು.
ಹಾಲು ಮತ ಸಮಾಜ ಬಾಂಧವರಿಗೆ ದಿಕ್ಸೂಚಿಯಾಗಿ ಭಕ್ತಿಯ ಶಕ್ತಿಯನ್ನು ತುಂಬಿದವರು. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರಿಗೂ ಶ್ರೀ ಬೀರಲಿಂಗೇಶ್ವರ ಸ್ವಾಮಿಗೂ ಇರುವ ಸಂಬಂಧವನ್ನು ಎಷ್ಟು ಕೊಂಡಾಡಿದರೂ ಸಾಲದು. ಆಸಂದಿ ಶ್ರೀ ಗುರು ರೇವಣಸಿದ್ಧೇಶ್ವರ ಮಠದ ಮತ್ತು ಬೇಗೂರು ಬೀರಲಿಂಗೇಶ್ವರಸ್ವಾಮಿ ಗುಡಕಟ್ಟಿನ ಗೌಡರು ದೊಡ್ಡಿಗೌಡರು ಹಾಗೂ ಉಭಯ ಕಾರ್ಯಕಾರಿ ವಿಶ್ವಸ್ಥ ಮಂಡಳಿಯವರು ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಜಾಗೃತಿ ಸಮಾರಂಭ ಸಂಘಟಿಸಿರುವುದು ಜಗದ್ಗುರುಗಳಿಗೆ ಅತ್ಯಂತ ಸಂತೋಷವನ್ನು ತಂದಿದೆ. ಈ ಮಹತ್ಕಾರ್ಯ ಸಾಧನೆಗಾಗಿ ಶ್ರಮಿಸುತ್ತಿರುವ ಎಲ್ಲಾ ಹಾಲು ಮತ ಬಾಂಧವರಿಗೆ ಶುಭವಾಗಲೆಂದು ಹಾರೈಸಿದರು.
ಬೀರೂರು ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿದರು. ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯರು, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯರು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ಒಡೆಯರ್ ವಂಶಸ್ಥರು ಮತ್ತು ಮಠದ ಮನೆಯ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಶ್ರೀ ಗುರು ರೇವಣಸಿದ್ಧೇಶ್ವರ ಮಠದ ವಿಶ್ವಸ್ಥ ಮಂಡಳಿ ಅಧ್ಯಕ್ಷ ರೇವಣಪ್ಪನವರು, ಕಾರ್ಯದರ್ಶಿ ಶಾಂತಪ್ಪನವರು, ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ, ಅ.ಭಾ,ವೀ.ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಲೋಕೇಶ್ ಮಾತನಾಡಿದರು. ಉಪನ್ಯಾಸಕ ಆಸಂದಿ ಕುಮಾರ ನಿರೂಪಿಸಿದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಕಷ್ಟಗಳು ಬಂದಾಗ ಯಾರ ಹತ್ತಿರ ಸಲಹೆಯನ್ನು ಕೇಳಬೇಕೆಂಬುದು ಮುಖ್ಯ. ಯಾಕೆಂದರೆ ದುರ್ಯೋಧನ ಶಕುನಿ ಹತ್ತಿರ ಸಲಹೆ ಕೇಳುತ್ತಿದ್ದ. ಆದರೆ ಅರ್ಜುನ ಶ್ರೀ ಕೃಷ್ಣನ ಬಳಿ ಸಲಹೆ ಕೇಳುತ್ತಿದ್ದ ಎಂಬುದನ್ನು ಮನುಷ್ಯ ಅರಿಯಬೇಕು. ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳ ಆಶೀರ್ವಾದದಿಂದ ನಿಂತು ಹೋದ ದೇವಸ್ಥಾನ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲೆಂದು ಆಶಿಸಿದರು.

Spread the love
Advertisement

LEAVE A REPLY

Please enter your comment!
Please enter your name here