Homecultureವೀರಶೈವ ಧರ್ಮ ಸಾಧಾರಣವಾದುದಲ್ಲ : ರಂಭಾಪುರಿ ಶ್ರೀಗಳು

ವೀರಶೈವ ಧರ್ಮ ಸಾಧಾರಣವಾದುದಲ್ಲ : ರಂಭಾಪುರಿ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಆಧ್ಯಾತ್ಮಿಕ ಕ್ಷೇತ್ರವನ್ನು ತಿಳಿದುಕೊಳ್ಳುವುದು, ಅದರಲ್ಲಿನ ಆಚರಣೆಗಳನ್ನು ಪಾಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇಷ್ಟಲಿಂಗ ಮಹಾಪೂಜೆ ನಮಗೆ ಇನ್ನಿಲ್ಲದ ಆನಂದವನ್ನು ನೀಡುತ್ತದೆ. ಅಂತರಂಗದಲ್ಲಿ ಮಾಡುವ ಈ ಪೂಜೆಯನ್ನು ಲೋಕಾಂತರಗೊಳಿಸಿದವರು ರಂಭಾಪುರಿ ಪೀಠದ ಹಿಂದಿನ ಜಗದ್ಗುರುಗಳಾದ ಶ್ರೀ ಗಂಗಾಧರ ಮಹಾಸ್ವಾಮಿಗಳು. ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾಡಿದ ಕಾರ್ಯ ಅನನ್ಯವಾದುದು ಎಂದು ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅಬ್ಬಿಗೇರಿಯ ಹೊಸ ಹಿರೇಮಠದಲ್ಲಿ 3ನೇ ದಿನದ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ ನಂತರ ನೆರೆದ ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಇಷ್ಟಲಿಂಗ ಪೂಜೆಯಲ್ಲಿ ಜಗನ್ನಿಯಾಮಕನಾದ ಶಿವನನ್ನು ನಾವು ಪೂಜಿಸುತ್ತೇವೆ. ಲಿಂಗ ರೂಪದಲ್ಲಿರುವ ಶಿವನ ಪೂಜೆ ಮನಸ್ಸಿಗೆ ಬಹಳಷ್ಟು ಆನಂದವನ್ನು ನೀಡುತ್ತದೆ. ಒಂದು ಸಂದರ್ಭದಲ್ಲಿ ಬ್ರಹ್ಮ ಶಿವನ ಮುಕುಟವನ್ನೂ, ವಿಷ್ಣು ಶಿವನ ಪಾದವನ್ನೂ ಕಾಣಲು ಹೋಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಅದರಲ್ಲಿ ವಿಷ್ಣು ಅಲ್ಪ ಪ್ರಮಾಣದ ಯಶ ಕಂಡರೂ ಬ್ರಹ್ಮ ಸುಳ್ಳು ಹೇಳಿದ್ದರಿಂದ ಅವನಿಗೆ ಶಿವ ಶಾಪ ಕೊಟ್ಟನು. ಶಿವನ ಶಾಪದಿಂದಲೇ ನಾವು ಎಲ್ಲಿಯೂ ಬ್ರಹ್ಮ ದೇವರ ದೇವಸ್ಥಾನಗಳನ್ನು ಕಾಣುವುದಿಲ್ಲ ಎಂದು ಜಗದ್ಗುರುಗಳು ಹೇಳಿದರು.

ಈ ಭಾಗದಲ್ಲಿ ಶ್ರೀ ಅನ್ನದಾನೇಶ್ವರ ಮಠ ಅತ್ಯಂತ ಪ್ರಭಾವಶಾಲಿ ಮಠವಾಗಿದೆ. ಈ ಹಿಂದಿನ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು ಲಿಂಗ ಪೂಜಾ ನಿಷ್ಠರಾಗಿದ್ದರು. ಅವರಿಂದ ಶಿವಯೋಗ ಮಂದಿರವು ಅತ್ಯಂತ ಸಮರ್ಥವಾಗಿ ಬೆಳೆಯಿತು. ಹಾಲಕೆರೆ ಮಠದ ಕೀರ್ತಿಯೂ ಸಹ ದಶ ದಿಕ್ಕುಗಳಲ್ಲಿ ಪಸರಿಸಿತು. ಲಿಂ. ಡಾ. ಅಭಿನವ ಅನ್ನದಾನ ಶ್ರೀಗಳವರ ಕ್ರಿಯಾಶೀಲತೆಗೆ ಯಾರೂ ಸಾಟಿಯಾಗಲಿಕ್ಕಿಲ್ಲ. ಹಾಲಕೆರೆಯಲ್ಲಿಯೂ ಒಂದು ಹಿರೇಮಠವಿದೆ. ಅದರ ಬೆಳವಣಿಗೆಯ ಕಡೆಗೂ ಭಕ್ತರು ಕಾಳಜಿ ವಹಿಸಬೇಕೆಂದು ಜಗದ್ಗುರುಗಳು ತಿಳಿಸಿದರು.

ಲಿಂಗಪೂಜಾ ಕಾರ್ಯದಲ್ಲಿ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕರ ಧರ್ಮಪತ್ನಿಯವರು, ಸುತ್ತಲಿನ ಗ್ರಾಮಗಳ ಅನೇಕ ಗಣ್ಯರು, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ನಿಡಗುಂದಿ, ಮಾರನಬಸರಿ, ಹಾಳಕೇರಿ ಹಾಗೂ ಅಬ್ಬಿಗೇರಿ ಗ್ರಾಮದ ಮಹಿಳೆಯರು ಕುಂಭವನ್ನು ಹೊತ್ತು ಬಂದಿದ್ದರು. ಇಷ್ಟಲಿಂಗ ಮಹಾಪೂಜೆಯಲ್ಲಿ ನಾಡಿನ ಅನೇಕ ಶ್ರೀಗಳು ಪಾಲ್ಗೊಂಡಿದ್ದರು.

ವೀರಶೈವ ಧರ್ಮ ಸಾಧಾರಣವಾದುದಲ್ಲ. ಹಸಿದು, ನೀರಡಿಸಿ ಬಂದವರನ್ನು ಸಮಾಧಾನಗೊಳಿಸುವುದೇ ವೀರಶೈವ ಧರ್ಮದ ಮೂಲ ತತ್ವವಾಗಿದೆ. ಹಿಂದೂ ಧರ್ಮದಲ್ಲಿ ಗೋಮಾತೆಗೆ ವಿಶಿಷ್ಠ ಸ್ಥಾನವಿದೆ. ಅದನ್ನು ಪುಣ್ಯದ ಪ್ರಾಣಿ ಎಂದು ಭಾವಿಸುವ ನಾವು ಗೋಮಾತೆಯ ಪೂಜೆಯನ್ನು ಮಾಡುತ್ತೇವೆ. ಗೋಮಾತೆಯಿಂದ ನಿಶ್ಚಿತ ಲಾಭವನ್ನು ಪಡೆಯಬೇಕೆಂದರೆ ಅದರ ಪೃಷ್ಠ ಭಾಗವನ್ನು ಅಂದರೆ ಹಿಂಬದಿಯನ್ನು ಶ್ರದ್ಧೆಯಿಂದ ಪೂಜಿಸಿದರೆ ಖಂಡಿತ ನಿಮ್ಮ ಮನದ ಆಸೆಗಳು ಈಡೇರುತ್ತವೆ ಎಂದು ರಂಭಾಪುರಿ ಶ್ರೀಗಳು ಹೇಳಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!