ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಹಣೆಯಲ್ಲಿ ವಿಭೂತಿ, ಕೊರಳಲ್ಲಿ ಲಿಂಗ ಮತ್ತು ರುದ್ರಾಕ್ಷಿ ಧಾರಣೆ ವೀರಶೈವ ಲಿಂಗಾಯತ ಧರ್ಮದ ಪ್ರಮುಖ ಆಚರಣೆಗಳು. ನಿತ್ಯವೂ ಇವುಗಳನ್ನು ಪಾಲಿಸಬೇಕಾದುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ನೀವು ಹಣೆಯಲ್ಲಿ ಧರಿಸುವ ಭಸ್ಮದಲ್ಲಿ ಸಾತ್ವಿಕತೆಯ ಕಳೆ ಇದೆ ಎಂದು ಶ್ರೀಮದ್ ಜಗದ್ಗುರು ರಂಭಾಪುರಿ ಶ್ರೀಗಳು ನುಡಿದರು.
ಅಬ್ಬಿಗೇರಿಯ ಹೊಸ ಹಿರೇಮಠದಲ್ಲಿ 4ನೇ ದಿನದ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ ನಂತರ ಅವರು ಆಶೀರ್ವಚನ ನೀಡಿ ಭಸ್ಮದ ಮಹಿಮೆಯನ್ನು ತಿಳಿಸಿದರು.
ವಿಭೂತಿ, ಬಸಿತ, ಭಸ್ಮ, ರಕ್ಷಾ ಮತ್ತು ಕ್ಷಾರ ಎಂಬ ಐದು ಭಸ್ಮಗಳು ನಂದಾ, ಭದ್ರಾ, ಸುರಭಿ, ಸುಶೀಲ ಮತ್ತು ಸುಮನ ಎಂಬ ಐದು ಹಸುಗಳ ಶುದ್ಧ ಗೋಮಯದಿಂದ ತಯಾರಾಗುತ್ತವೆ. ವಿಭೂತಿ ಧಾರಣೆಯಿಂದ ಸಂಪತ್ತು, ಬಸಿತ ಧಾರಣೆಯಿಂದ ಶಿವಜ್ಞಾನ, ಭಸ್ಮ ಧಾರಣೆಯಿಂದ ತಾಪ-ಪಾಗಳು ದೂರ, ರಕ್ಷಾ ಧಾರಣೆಯಿಂದ ಚರ್ಮ ರೋಗಗಳು ಇಲ್ಲವಾಗುತ್ತವೆ ಮತ್ತು ಕ್ಷಾರ ಧಾರಣೆಯಿಂದ ದುಷ್ಟ ಶಕ್ತಿಗಳ ಕಾಟವೇನಾದರೂ ಇದ್ದರೆ ಅದು ತೊಲಗಿ ಹೋಗುತ್ತದೆ. ಇಷ್ಟೊಂದು ಶಕ್ತಿ ಭಸ್ಮ ಮತ್ತು ವಿಭೂತಿಯಲ್ಲಿರುವಾಗ ಅದನ್ನು ಧರಿಸಲು ನೀವು ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು ಎಂದು ಜಗದ್ಗುರುಗಳು ಹೇಳಿದರು.
ಸಭೆಯನ್ನುದ್ದೇಶಿಸಿ ಬಾದಾಮಿಯ ಶ್ರೀಗಳು ಮಾತನಾಡಿದರು. ಸಿದ್ದರಬೆಟ್ಟ-ಹಿರೇಮಠ ಅಬ್ಬಿಗೇರಿಯ ಶ್ರೀ ವೀರಭದ್ರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗನ ರುದ್ರಾಣಿ ಬಳಗದವರು ರುದ್ರ ಪಠಣ ಮಾಡಿ ಗಮನ ಸೆಳೆದರು.