ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಮನುಷ್ಯ ಧರ್ಮದಿಂದ ಬಾಳುವುದನ್ನು ಕಲಿಯಬೇಕು. ಧರ್ಮಾಚರಣೆಯು ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿಯನ್ನು ನೀಡುತ್ತದೆ ಎಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಹೇಳಿದರು.
ಅಬ್ಬಿಗೇರಿಯ ಹೊಸ ಹಿರೇಮಠದ ಸಭಾಂಗಣದಲ್ಲಿ 5ನೇ ದಿನದ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಧರ್ಮವೆಂದರೆ ಬಹಳ ದೊಡ್ಡದೇನಲ್ಲ. ಯಾರ ಮನಸ್ಸನ್ನೂ ನೋಯಿಸದಿರುವುದು ಧರ್ಮ, ಇನ್ನೊಬ್ಬರ ವಸ್ತುವನ್ನು ಕಣ್ಣೆತ್ತಿ ನೋಡದಿರುವುದು ಧರ್ಮ, ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡದಿರುವುದು ಧರ್ಮ.
ಇದನ್ನು ಮಾನ ಧರ್ಮ ಎನ್ನುತ್ತೇವೆ. ಈ ಮಾನವ ಧರ್ಮವನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ನಾವು ಮನುಷ್ಯರಾಗುತ್ತೇವೆ. ಇಲ್ಲವಾದರೆ ರಾಕ್ಷಸರಾಗುತ್ತೇವೆ. ಮಾನವ ಆಗುವುದು, ದಾನವ ಆಗುವುದು ಎರಡೂ ನಮ್ಮ ಕೈಯಲ್ಲಿಯೆ ಇವೆ ಎಂದು ಜಗದ್ಗುರುಗಳು ತಿಳಿಸಿದರು.
ಜಗತ್ತಿನಲ್ಲಿ ಗೆಳೆತನಕ್ಕೆ ಬಹಳ ಮಹತ್ವವಿದೆ. ನಮ್ಮ ಗೆಳೆತನ ಹೇಗಿರಬೇಕೆಂದರೆ, ಕೃಷ್ಣ-ಸುಧಾಮನ ಗೆಳೆತನದಂತೆ ಇರಬೇಕು. ತನ್ನ ಗೆಳೆಯ ತೊಂದರೆಯಲ್ಲಿದ್ದಾನೆ, ಅವನಿಗೆ ಶ್ರೀಕ್ಷಯ ಆಗಿದೆ ಎಂದು ಗೊತ್ತಾದ ತಕ್ಷಣ ಕೃಷ್ಣ ಸುಧಾಮನನ್ನು ಕೃಪಾ ದೃಷ್ಟಿಯಿಂದ ನೋಡಿದ. ಭಗವಂತನ ದೃಷ್ಟಿ ಬಿದ್ದ ಮೇಲೆ ಶ್ರೀಕ್ಷಯನಾಗಿದ್ದ ಸುಧಾಮ ಶ್ರೀಮಂತನಾದ. ಭಗವಂತನ ದೃಷ್ಟಿಗೆ ಬೀಳಲು ಎಲ್ಲರೂ ತವಕಿಸಬೇಕು. ಅಂದಾಗ ಜೀವನಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದ ಜಗದ್ಗುರುಗಳು, ಇತ್ತೀಚಿನ ದಿನಗಳಲ್ಲಿ ಸ್ನೇಹಕ್ಕೆ ಯಾವುದೇ ಅರ್ಥವಿಲ್ಲವೆಂದು ವಿಷಾದಿಸಿದರು.
ಈ ಭಾಗದಲ್ಲಿ ರೈತಾಪಿ ವರ್ಗದ ಜನರೇ ಹೆಚ್ಚಾಗಿದ್ದಾರೆ. ಆದ್ದರಿಂದ ಅವರಲ್ಲಿ ತಿಳಿಸುವುದೇನೆಚಿದರೆ, ಸಾವಯವ ಕೃಷಿಯ ಕಡೆಗೆ ಹೆಚ್ಚಿನ ಗಮನ ನೀಡಿ. ಇದರಿಂದ ರೋಗ ನಿರೋಧಕ ಬೆಳೆಗಳನ್ನು ಬೆಳೆಯಲು ಸಹಾಯಕವಾಗುತ್ತದೆ. ಅದಕ್ಕೆಂದೇ ಧರ್ಮ ಸಮ್ಮೇಳನದಲ್ಲಿ ಸಾವಯವ ಕೃಷಿಯ ಬಗ್ಗೆ ಒಂದು ವಿಶೇಷ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.
ನಾಡಿನ ಅನೇಕ ಹರ-ಗುರು-ಚರಮೂರ್ತಿಗಳು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಹಾಪೂಜೆಗೆ ಕೋಟುಮಚಗಿ, ನಾರಾಯಣಪೂರ, ಕಣಗಿನಹಾಳ ಹಾಗೂ ಅಬ್ಬಿಗೇರಿ ಗ್ರಾಮದ 2ನೇ ವಾರ್ಡ್ನ ಮಹಿಳೆಯರು ಕುಂಭಗಳೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಕ್ಕಳು ಚಿಕ್ಕವರಿರುವಾಗಲೇ ಅವರಲ್ಲಿ ಆದರ್ಶದ ಗುಣಗಳನ್ನು ಬಿತ್ತಲು ಪ್ರಯತ್ನಿಸಿ. ಇಲ್ಲವಾದರೆ ನಾಳೆಗೆ ನಿಮ್ಮ ಮಕ್ಕಳು ನಿಮಗೇ ವೈರಿಯಾದಾರು. ಅವರಲ್ಲಿ ಸಮಾಧಾನದ ಗುಣ, ಸಂಸ್ಕಾರ, ಸಂಸ್ಕೃತಿಗಳನ್ನು ಈಗಿನಿಂದಲೇ ಕಲಿಸಿದರೆ ಮುಂದೆ ಅವರು ಈ ದೇಶಕ್ಕೆ ದೊಡ್ಡ ಆಸ್ತಿಯಾಗುತ್ತಾರೆ ಎಂದು ಶ್ರೀಗಳು ಕಿವಿಮಾತು ಹೇಳಿದರು.