ಬೆಂಗಳೂರು: ಕೋಮುವಾದದ ಕಾರಣದಿಂದ ಕರಾವಳಿ ಭಾಗದಲ್ಲಿ ಐಟಿ–ಬಿಟಿ ಕಂಪನಿಗಳು ಬಂಡವಾಳ ಹೂಡಿಕೆಗೆ ಹೆದರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.
ನಗರದ ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಐಟಿ–ಬಿಟಿ ಕಂಪನಿಗಳಿಗೆ ಹೂಡಿಕೆ ಮಾಡಲು ನಾವು ಆಹ್ವಾನ ನೀಡುತ್ತೇವೆ. ಕಂಪನಿಗಳು ಸಿದ್ಧವಾಗಿರುತ್ತವೆ. ಆದರೆ ನಾಳೆ ಅವರ ಉದ್ಯೋಗಿಗಳಿಗೆ ತೊಂದರೆ ಉಂಟಾದರೆ ಏನು ಮಾಡಬೇಕು ಎಂಬ ಚಿಂತೆಯೂ ಅವರಲ್ಲಿ ಇದೆ. ಧರ್ಮಗುರುಗಳು ಮತ್ತು ರಾಜಕಾರಣಿಗಳು ಪ್ರಬುದ್ಧವಾಗಿ ಮಾತನಾಡುವವರೆಗೂ ಸಮಾಜದ ಉದ್ಧಾರ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಧರ್ಮಗುರುಗಳು ಸೃಷ್ಟಿಸುವ ಧರ್ಮದ ನಶೆ ನಿಲ್ಲಬೇಕು,” ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, “ನಾನು ಅದಮಾರು ಮಠದಲ್ಲಿ ಓದಿದವನು. ತೇಜಸ್ವಿ ಸೂರ್ಯ ಕಾನ್ವೆಂಟ್‌ನಲ್ಲಿ ಓದಿದ್ದಾರೆ. ಆದರೂ ನನ್ನನ್ನು ಮಾತ್ರ ಕಾನ್ವೆಂಟ್‌ನಲ್ಲಿ ಓದಿದವನು ಎಂದು ಹೇಳಲಾಗುತ್ತದೆ. ಧರ್ಮ ಮನುಷ್ಯನಿಗಾಗಿ ಇರಬೇಕು; ಮನುಷ್ಯ ಧರ್ಮಕ್ಕಾಗಿ ಅಲ್ಲ,” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, “ಈಗ ಔರಂಗಜೇಬನ ಸಮಾಧಿ ತೆಗೆಯಲು ಜ್ಞಾನೋದಯವಾಗಿದೆ ಎಂದು ಮಾತನಾಡುವುದು ಸರಿಯಲ್ಲ,” ಎಂದು ಕಿಡಿಕಾರಿದರು. ಅವರು ಪರೋಕ್ಷವಾಗಿ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು.



