HomeKarnataka Newsಟನಲ್ ಯೋಜನೆಗೆ ಲಾಲ್ ಬಾಗ್ 6 ಎಕರೆ ವಶ ಎಂಬುದು ಸುಳ್ಳು: ಡಿಸಿಎಂ ಡಿ.ಕೆ. ಶಿವಕುಮಾರ್

ಟನಲ್ ಯೋಜನೆಗೆ ಲಾಲ್ ಬಾಗ್ 6 ಎಕರೆ ವಶ ಎಂಬುದು ಸುಳ್ಳು: ಡಿಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: ಸಾರ್ವಜನಿಕರು ಬಯಸಿದಂತೆ ಲಾಲ್ ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ 10 ಕೋಟಿ ರೂ. ಅನುದಾನ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಲಾಲ್ ಬಾಗ್ ನಲ್ಲಿ ನಾಗರೀಕರ ಜತೆ ನಡಿಗೆ ಹಾಗೂ ಸಂವಾದದ ನಂತರ ಟನಲ್ ರಸ್ತೆಗೆ ಪ್ರವೇಶ ಜಾಗ ಪರಿಶೀಲನೆ ನಡೆಸಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಅನೇಕ ಸಾರ್ವಜನಿಕರ ಜೊತೆ ಚರ್ಚೆ ಮಾಡಿ ಅವರ ಸಲಹೆ, ದೂರು ಆಲಿಸಿದ್ದೇನೆ. ಅವರ ಸಮಸ್ಯೆ ಬಗೆಹರಿಸಲಾಗುವುದು. ಲಾಲ್ ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ 10 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಿದ್ದೇವೆ. ಹಿರಿಯರು ಹಾಗೂ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಮ್ ಮಾಡಲಾಗುವುದು” ಎಂದು ಭರವಸೆ ನೀಡಿದರು.“ಬೆಂಗಳೂರಿನಲ್ಲಿ ಅವಕಾಶ ಇರುವೆಡೆ ಲಾಲ್ ಬಾಗ್ ಮಾದರಿಯಲ್ಲಿ ಟ್ರೀಪಾರ್ಕ್ ಮಾಡಲು ಅರಣ್ಯ ಇಲಾಖೆ ಜೊತೆ ಚರ್ಚೆ ಮಾಡುತ್ತೇನೆ. ಅದಕ್ಕೆ ಆರ್ಥಿಕ ಬೆಂಬಲವನ್ನು ನೀಡಲಾಗುವುದು” ಎಂದು ತಿಳಿಸಿದರು.

“ಇಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯರು ಹಾಗೂ ಆಂಬುಲೆನ್ಸ್ ಸೇವೆ ನಿಯೋಜನೆಗೆ ತೀರ್ಮಾನಿಸಿದ್ದೇವೆ. ಇನ್ನು ಮುಂದೆ ಇಲ್ಲಿನ ಶೌಚಾಲಯಗಳ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು.ಬೆಂಗಳೂರಿನ ಕಸ ವಿಲೇವಾರಿ, ವಾಹನ ನಿಲುಗಡೆ, ಸೇರಿದಂತೆ ಅನೇಕ ವಿಚಾರವಾಗಿ ಸಲಹೆ, ಅಭಿಪ್ರಾಯಗಳು ಬಂದಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಟನಲ್ ರಸ್ತೆಗೆ ಲಾಲ್ ಬಾಗ್ ನ 6 ಎಕರೆ ಭೂಮಿ ಅಗತ್ಯವಿಲ್ಲ

“ಲಾಲ್ ಬಾಗ್ ಸಾರ್ವಜನಿಕರ ಆಸ್ತಿ. ಈ ಸಾರ್ವಜನಿಕರ ಆಸ್ತಿ ಉಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಆರು ಎಕರೆ ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಅರ್ಧ ಎಕರೆ ಪ್ರದೇಶದಲ್ಲಿ ಅಶೋಕ ಪಿಲ್ಲರ್ ಕಡೆ ಟನಲ್ ರಸ್ತೆಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗುವುದು. ಪಾರ್ಕಿಂಗ್ ಗಾಗಿ ಇರುವ ಜಾಗದಲ್ಲಿ ಸುಮಾರು ಒಂದು ಎಕರೆ ಜಾಗವನ್ನು ಸ್ಟೋರೇಜ್ ಗೆ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ ಲಾಲ್ ಬಾಗ್ ಗೆ ಕೊಡುತ್ತೇವೆ. ಸಣ್ಣದಾಗಿರುವ ಗಿಡಗಳನ್ನು ತೆರವುಗೊಳಿಸಿ, ಮತ್ತೆ ಗಿಡ ನೆಡುತ್ತೇವೆ. ಉಳಿದಂತೆ ಲಾಲ್ ಬಾಗ್ ಉದ್ಯಾನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಈ ಯೋಜನೆ ಆರಂಭ ಯಾವಾಗ ಎಂದು ಕೇಳಿದಾಗ, “ನಾವು ಯೋಜನೆಯ ಟೆಂಡರ್ ಕರೆಯಲಾಗಿದೆ. ಬಿಡ್ ನಲ್ಲಿ ಯಾರು ಭಾಗವಹಿಸುತ್ತಾರೆ ಎಂದು ನೋಡಿ, ನಂತರ ಅತ್ಯುತ್ತಮ ಬಿಡ್ ಮಾಡಿದವರಿಗೆ ನೀಡಲಾಗುವುದು” ಎಂದು ತಿಳಿಸಿದರು.

ಮುಂದಿನ ದಿನಗಳಲ್ಲೂ ಉದ್ಯಾನಗಳಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮ ಮುಂದುವರಿಸುತ್ತೀರಾ ಎಂದು ಕೇಳಿದಾಗ, “ಎಲ್ಲಾ ಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ, ಸಲಹೆ, ಅಹವಾಲು ಆಲಿಸಲಾಗುವುದು” ಎಂದು ತಿಳಿಸಿದರು.

ಜನರು ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ನಿಮ್ಮ ಬಳಿ ಚರ್ಚಿಸಿದ್ದಾರೆ ಎಂದು ಕೇಳಿದಾಗ, “ಈ ವಿಚಾರವಾಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು, ಎಲ್ಲೆಲ್ಲಿ ಬ್ಲಾಕ್ ಸ್ಪಾಟ್ ಇದೆಯೋ ಅಲ್ಲಿ ಕ್ಯಾಮೆರಾ ಅಳವಡಿಸಿ, ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಬಿಜೆಪಿಯವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಮುಖ್ಯ

ಜಿಬಿಎ ವಿಚಾರದಲ್ಲಿ ಬಿಜೆಪಿಯವರ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರಿಗೆ ಬೆಂಗಳೂರು ಅಭಿವೃದ್ಧಿ ಮುಖ್ಯವಲ್ಲ, ರಾಜಕೀಯವೇ ಮುಖ್ಯ. ಅವರು ಜಿಬಿಎ ಸಮಿತಿ ಸಭೆಯಲ್ಲಿ ತಮ್ಮ ಅಭಿಪ್ರಾಯ, ಸಲಹೆ, ದೂರು ಹೇಳಿಕೊಳ್ಳಬಹುದಾಗಿತ್ತು. ಜನ ಅವರನ್ನು ಗೆಲ್ಲಿಸಿ ಅಧಿಕಾರ ನೀಡಿದ್ದು, ಆ ಜನರ ಧ್ವನಿಯಾಗಬೇಕಿತ್ತು. ಆದರೆ ಆ ಕೆಲಸ ಮಾಡಲಿಲ್ಲ. ಬದಲಿಗೆ ಜಿಬಿಎ ರದ್ದು ಮಾಡುವುದಾಗಿ ಹೇಳಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಇದುವರೆಗೂ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಯೋಜನೆ, ತೀರ್ಮಾನಗಳನ್ನು ಯಾವುದೇ ಸರ್ಕಾರ ಬದಲಿಸಲು ಸಾಧ್ಯವಾಗಿಲ್ಲ.

ನಮ್ಮ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಜನಪರ ತೀರ್ಮಾನ ಮಾಡುತ್ತೇವೆ. ಮುಂದೆ ಅವರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಅವರು ಈ ಆಲೋಚನೆ ಮಾಡುವುದು ಬೇಡ. ಅವರು ಜಿಬಿಎ ವಿರೋಧಿಸುವುದೇ ಆದರೆ ಪಾಲಿಕೆ ಚುನಾವಣೆ ಬಹಿಷ್ಕರಿಸಲಿ. ಮೇಯರ್ ಅಧಿಕಾರ ಅವಧಿಯನ್ನು ನಾವು ಎರಡೂವರೇ ವರ್ಷಕ್ಕೆ ವಿಸ್ತರಿಸಿದ್ದೇವೆ. ಇನ್ನು ವಾರ್ಡ್ ಸಮಿತಿಗಳಲ್ಲಿ ಐದು ಸಾವಿರ ಸದಸ್ಯರು ಇರುತ್ತಾರೆ. 369 ಪಾಲಿಕೆ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಇದರಲ್ಲಿ 50% ಮಹಿಳೆಯರು ಇರುತ್ತಾರೆ” ಎಂದರು. ಸರ್ಜಾಪುರದಲ್ಲಿ ಭಾರಿ ಮಳೆಯಿಂದ ರೈನ್ ಬೋ ಬಡಾವಣೆಗೆ ತೊಂದರೆಯಾಗಿದೆ ಎಂದು ಕೇಳಿದಾಗ, “ಅಧಿಕಾರಿಗಳ ಬಳಿ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಗಾಳಿ ಸುದ್ದಿ:

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಅಧಿಕಾರವೂ ಇಲ್ಲ. ಮಾಧ್ಯಮಗಳು ಗಾಳಿ ಸುದ್ದಿ ಪ್ರಕಟಿಸುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಥವಾ ನಾನು ಪ್ರಸ್ತಾವನೆ ಮಾಡಬೇಕು. ನಾವಿಬ್ಬರೂ ಪ್ರಸ್ತಾಪ ಮಾಡಲಿಲ್ಲವಾದರೆ ಅದು ಗಾಳಿ ಸುದ್ದಿ. ಆತುರದಲ್ಲಿರುವವರು, ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ” ಎಂದು ತಿಳಿಸಿದರು.

ಸಿಎಂ ಸಭೆ ಬಗ್ಗೆ ಕೇಳಿದಾಗ, “ಮುಂದೆ ಪಾಲಿಕೆಗಳು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಾರೆ. ನಾನು ಕೂಡ ಇಂದು ಜಿಬಿಎ ಪಾಲಿಕೆಗಳ ಚುನಾವಣೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ” ಎಂದು ತಿಳಿಸಿದರು.

ಪಾಲಿಕೆಗಳಲ್ಲಿ ಸಿಬ್ಬಂದಿ ಹಾಗೂ ಕಟ್ಟಡ ಸಮಸ್ಯೆ ಬಗ್ಗೆ ಕೇಳಿದಾಗ, “ಈ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಕಟ್ಟಡ ನಿರ್ಮಾಣಕ್ಕೆ ಜಾಗಗಳು ಗುರುತಿಸಲಾಗಿದ್ದು, 2 ವರ್ಷದಲ್ಲಿ ನಿರ್ಮಾಣ ಮಾಡುತ್ತೇವೆ. ಅಲ್ಲಿಯವರೆಗೂ ಬಾಡಿಗೆ ಕಟ್ಟಡದಲ್ಲಾದರೂ ವ್ಯವಸ್ಥೆ ಮಾಡುತ್ತೇವೆ” ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!