ವಿಜಯಸಾಕ್ಷಿ ಸುದ್ದಿ, ಗದಗ: ಒತ್ತಡ, ಆತಂಕ, ನಿರೀಕ್ಷೆ ಇತ್ಯಾದಿಗಳು ನಿತ್ಯದ ಬದುಕಿನಲ್ಲಿ ಒಳಗೊಂಡಿವೆ. ದೈಹಿಕ ಆರೋಗ್ಯದಷ್ಟೇ ಮಾನಸಿಕವಾಗಿ ಸದೃಢರಾಗಿರಬೇಕಾಗಿರುವುದು ಇಂದಿನ ಜೀವನದಲ್ಲಿ ಅತ್ಯವಶ್ಯಕವಾಗಿದೆ. ಮಾನಸಿಕ ಅಸ್ವಸ್ಥರಿಗೆ ಮಾನಸಿಕ ಆರೋಗ್ಯ ರಕ್ಷಣೆಯನ್ನು ಪಡೆಯುವ ಹಕ್ಕು, ಸಮುದಾಯದಲ್ಲಿ ಜೀವಿಸುವ ಹಕ್ಕು, ಘನತೆಯಿಂದ ಬದುಕುವ ಹಕ್ಕು, ವೈದ್ಯಕೀಯ ದಾಖಲೆಗಳನ್ನು ಪಡೆಯುವ ಹಕ್ಕು ಇದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ ಸಿ.ಎಂ ತಿಳಿಸಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಪುನರ್ವಿಮರ್ಶಾ ಮಂಡಳಿ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರು ಮಾತನಾಡಿ, ಅಸಹಜ ನಡುವಳಿಕೆ, ಗುರಿ ಇಲ್ಲದೆ ಅಲೆದಾಡುವುದು, ಗೊಣಗುವುದು ಅಥವಾ ಸ್ವಯಂ ನಗುವುದು, ಮಾದಕ ವಸ್ತು ಅವಲಂಬನೆ, ಅತಿಯಾದ ಚಿಂತೆ, ಚಡಪಡಿಕೆ ಹೀಗೆ ಮೊದಲಾದವು ಮಾನಸಿಕ ಅಸಮತೋಲನದ ಲಕ್ಷಣಗಳು. ಮಾನಸಿಕ ಆರೋಗ್ಯವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದ್ದು, ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆಯಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ಸಹಾಯಕ ಕಾನೂನು ಅಭಿರಕ್ಷಕರಾದ ಗುರುರಾಜ ಬಿ. ಗೌರಿ ವಕೀಲರು, ಜಿಲ್ಲಾ ಮಾನಸಿಕ ಆರೋಗ್ಯ ಪುನರ್ವಿಮರ್ಶಾ ಮಂಡಳಿಯ ಸದಸ್ಯ ಆರ್.ಎಚ್. ಪಾಟೀಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ ಪಾಲ್ಗೊಂಡಿದ್ದರು.
ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಎಮ್.ಎಮ್. ಬುರುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿನಿಯರಾದ ಮಂಜುಶ್ರೀ ಹಿರೇಮಠ ಮತ್ತು ಅನುಶ್ರೀ ಪ್ರಾರ್ಥಿಸಿದರು. ಪ್ರೊ. ಆನಂದ ದೇಸಾಯಿಪಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮನೋವೈದ್ಯರಾದ ಡಾ. ಸೋಮಶೇಖರ ಬಿಜ್ಜಳ ಉಪನ್ಯಾಸ ನೀಡಿ, ಮಾನಸಿಕ ಖಾಯಿಲೆಗಳು ಬರಲು ಕಾರಣ, ಅತಿಯಾದ ಬೇಸರ, ನಿರಾಸಕ್ತಿ, ಸುಸ್ತು, ಏಕಾಗ್ರತೆ ಕೊರತೆ, ನಕಾರಾತ್ಮಕ ಹಾಗೂ ಆತ್ಮಹತ್ಯೆ ಆಲೋಚನೆಗಳು ಹೀಗೆ ಹಲವಾರು ಕಾರಣಗಳನ್ನು ಗುರುತಿಸುವುದು ಹೇಗೆ ಹಾಗೂ ಮಾನಸಿಕವಾಗಿ ಸದೃಢರಾಗಲು ಬೇಕಾಗುವ ಕೌಶಲ್ಯಗಳ ಕುರಿತು ಸವಿವರವಾಗಿ ತಿಳಿಸಿದರು.



