ಹಾವೇರಿ:- ಸಿಎಂ ಬದಲಾವಣೆ ವಿಚಾರದಲ್ಲಿ ಮಠಾಧೀಶರು ರಾಜಕೀಯ ಮಾತನಾಡೋದು ಸೂಕ್ತವಲ್ಲ ಎಂದು ಕಾಗಿನೆಲೆ ಶಾಖಾಮಠದ ತಿಂಥಣಿಯ ಸಿದ್ದರಾಮಾನಂದ ಪುರಿ ಶ್ರೀ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಪರ ಆದಿಚುಂಚನಗಿರಿ ಶ್ರೀ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಮಠಾಧೀಶರ ಮಧ್ಯಪ್ರವೇಶ ಸೂಕ್ತವಲ್ಲ. ಮಧ್ಯಪ್ರವೇಶ ಮಾಡಿ, ಗೊಂದಲ ಸೃಷ್ಟಿಸುವುದು ಸರಿಯಲ್ಲ. ಸಿದ್ದರಾಮಯ್ಯನವರನ್ನು ಎಂದೂ ಕುರುಬ ನಾಯಕ ಎಂದು ನೋಡಿಲ್ಲ. ಯಾವುದೇ ಮಠಾಧೀಶರು ರಾಜಕೀಯ ಮಾತನಾಡೋದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಮಠಾಧೀಶರು ಧಾರ್ಮೀಕ ಪ್ರತಿನಿಧಿಗಳು, ಮಾನವೀಯತೆ ಪ್ರತಿನಿಧಿಗಳು. ಈ ಹಿಂದೆ ಕೆಲವೊಂದು ಸಂದರ್ಭಗಳಲ್ಲಿ ಅವಮಾನ ಆಗುವಂತೆ ಮಾತನಾಡಿದ ನಿದರ್ಶನ ಕೇಳಿದ್ದೇವೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾನವೀಯತೆ ನೋಡದೇ, ಸಮಾನತೆಯನ್ನ ನೋಡದೇ, ಕೇವಲ ಸ್ವಾರ್ಥವನ್ನು ಅಭಿಪ್ರಾಯ ವ್ಯಕ್ತಪಡಿಸಿದನ್ನು ನೋಡಿದ್ದೇವೆ. ಈಗ ರಾಜ್ಯದಲ್ಲಿ ಹಲವಾರು ಸಮುದಾಯಗಳಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ಹಲವಾರು ಸಮುದಾಯಗಳು ರಾಜ್ಯದ ಉನ್ನತ ಹುದ್ದೆಗಳನ್ನ ಅಲಂಕರಿಸುವ ಹಪಾಹಪಿಯಲ್ಲಿದ್ದಾರೆ ಎಂದರು.
ನಾವು ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಯಾವಾಗಲೂ ಅವರ ಜೊತೆಗೆ ಇರುತ್ತೇವೆ. ಸಾಮಾಜಿಕ ನ್ಯಾಯದಲ್ಲಿ ಯಾವುದೇ ನಾಯಕರು ಮುಂದೆ ಬಂದರೆ ನಾವು ಇರುತ್ತೇವೆ. ರಾಜ್ಯದ ಜನರು ಗಮನಿಸುತ್ತಿದ್ದಾರೆ. ಸ್ವಾಮೀಜಿ ಜಾತಿ ಹಿನ್ನೆಲೆಯಲ್ಲಿ ಮಾತನಾಡಬಾರದಿತ್ತು. ಇದರಿಂದ ಬೇರೆ ಸಮುದಾಯವನ್ನು ಅವಮಾನಿಸಿದಂತೆ ಆಗಿದೆ ಎಂದರು.



