ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆಯ ಹರಾಜು ಪ್ರಕ್ರಿಯೆ ಶಿರಹಟ್ಟಿಯಲ್ಲಿಯೇ ಆಗಬೇಕೆಂದು ಆಗ್ರಹಿಸಿ ಬುಧವಾರ ತಹಸೀಲ್ದಾರ ಅನಿಲ ಬಡಿಗೇರ ಅವರಿಗೆ ಪಕ್ಷಾತೀತವಾಗಿ ಸಾರ್ವಜನಿಕರಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಶಿರಹಟ್ಟಿಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಈಗಾಗಲೇ ನಿರ್ಮಾಣಗೊಂಡ ಹಾಗೂ ಹಳೆಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಜು.6ರಂದು ಲಕ್ಷ್ಮೇಶ್ವರದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಮಾಡಲು ನಿರ್ಧರಿಸಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಶಿರಹಟ್ಟಿಯ ಪಟ್ಟಣದವರೇ 60 ಜನ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಟೆಂಡರ್ ಪ್ರಕ್ರಿಯೆಯನ್ನು ಶಿರಹಟ್ಟಿಯಲ್ಲಿಯೇ ಮಾಡಬೇಕು ಎಂದರು.
ಅಕ್ಬರಸಾಬ ಯಾದಗಿರಿ ಮಾತನಾಡಿ, ಶಿರಹಟ್ಟಿ ಎಪಿಎಂಸಿ ಉಪ ಮಾರುಕಟ್ಟೆಯ ಹರಾಜು ಪ್ರಕ್ರಿಯೆಯನ್ನು ಶಿರಹಟ್ಟಿಯಲ್ಲಿಯೇ ಮಾಡಬೇಕೆಂದು ಆಗ್ರಹಿಸಿ ಶಿರಹಟ್ಟಿಯ ಎಪಿಎಂಸಿ ಉಪ ಮಾರುಕಟ್ಟೆಯ ಹೊಸ ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಜು.4ರ ಬೆಳಿಗ್ಗೆ 11 ಗಂಟೆಗೆ ತುರ್ತು ಪ್ರತಿಭಟನೆಯನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಫಕ್ಕೀರೇಶ ರಟ್ಟಿಹಳ್ಳಿ, ಬಸವರಾಜ ವಡವಿ, ರಾಮಣ್ಣ ಕಂಬಳಿ, ಅಲ್ಲಾಭಕ್ಷಿ ನಗಾರಿ, ರಾಮಚಂದ್ರ ಗಡದವರ, ಎಸ್.ವಿ. ಲಕ್ಕುಂಡಿಮಠ, ಸಿದ್ದಪ್ಪ ವಡ್ಡರ ಮುಂತಾದವರು ಉಪಸ್ಥಿತರಿದ್ದರು.