ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ವಿರುದ್ಧದ ಕಾನೂನು ಸಂಕಷ್ಟಗಳು ಮತ್ತೊಂದು ಹಂತ ತಲುಪಿವೆ. ಆದಾಯ ತೆರಿಗೆ ಇಲಾಖೆ ಗುರುವಾರ (ಡಿಸೆಂಬರ್ 18) ಮುಂಬೈಯಲ್ಲಿರುವ ಶಿಲ್ಪಾ ಶೆಟ್ಟಿ ನಿವಾಸದ ಮೇಲೆ ದಾಳಿ ನಡೆಸಿದೆ. ಇದಕ್ಕೂ ಮುನ್ನ ಬುಧವಾರ (ಡಿಸೆಂಬರ್ 17) ಬೆಂಗಳೂರಿನಲ್ಲಿ ನಟಿಗೆ ಸಂಬಂಧಿಸಿದ ಜಾಗಗಳು ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಬೆಂಗಳೂರಿನ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ‘ಬಾಸ್ಟಿಯನ್ ಗಾರ್ಡನ್ ಸಿಟಿ’ ಪಬ್ ಶಿಲ್ಪಾ ಶೆಟ್ಟಿ ಅವರ ಪ್ರಮುಖ ವ್ಯವಹಾರಗಳಲ್ಲಿ ಒಂದಾಗಿದೆ. ಐಟಿ ಅಧಿಕಾರಿಗಳು ಪಬ್ ಮಾತ್ರವಲ್ಲದೇ, ಇನ್ನೂ ಕೆಲವು ಸಂಬಂಧಿತ ಸ್ಥಳಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ತೆರಿಗೆ ಪಾವತಿ, ಹೂಡಿಕೆ ಹಾಗೂ ಲಾಭದ ವಿವರಗಳ ಕುರಿತು ತಪಾಸಣೆ ನಡೆದಿದೆ.
ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ 60 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ತನಿಖೆ ಚುರುಕುಗೊಳಿಸಿದ್ದು, ದಾಳಿಗಳು ನಡೆದಿವೆ ಎನ್ನಲಾಗಿದೆ.
ಬಾಸ್ಟಿಯನ್ ಪಬ್ ಮೇಲೆ ನಡೆದ ದಾಳಿಯಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಐದು ಕಾರುಗಳಲ್ಲಿ ಬಂದ ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಭಾಗವಹಿಸಿದ್ದರು. ಪಬ್ ಗ್ರಾಹಕರಿಗೆ ಸೇವೆ ಮುಂದುವರಿಸಲು ಅವಕಾಶ ನೀಡಿದರೂ, ಆಡಳಿತ ಮತ್ತು ಅಕೌಂಟ್ಸ್ ವಿಭಾಗವನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ. ಇಷ್ಟು ವರ್ಷಗಳಲ್ಲಿ ಪಾವತಿಸಿರುವ ತೆರಿಗೆ ಮತ್ತು ವಾಸ್ತವಿಕ ವ್ಯಾಪಾರದ ನಡುವಿನ ವ್ಯತ್ಯಾಸವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಇದಕ್ಕೂ ಮುನ್ನ ಇದೇ ಪಬ್‌ನಲ್ಲಿ ಗಲಾಟೆ ಪ್ರಕರಣ ಮತ್ತು ಸಮಯ ಮೀರಿಸಿ ಕಾರ್ಯನಿರ್ವಹಿಸಿದ ಆರೋಪಗಳು ದಾಖಲಾಗಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೀಗಾಗಿ, ಕಳೆದ ಕೆಲ ದಿನಗಳಲ್ಲೇ ಶಿಲ್ಪಾ ಶೆಟ್ಟಿ ಪಬ್ ಒಂದೇ ಸ್ಥಳದಲ್ಲಿ ಪೊಲೀಸ್ ಕೇಸ್ ಮತ್ತು ಐಟಿ ದಾಳಿಯನ್ನು ಎದುರಿಸಿದೆ. ಐಟಿ ಇಲಾಖೆ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.



