ಬೆಂಗಳೂರು:- ದಪ್ಪ ಚರ್ಮದವರನ್ನ ದಾರಿಗೆ ತರೋದು ಕಷ್ಟ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಬಿಸಿ ಮುಟ್ಟಿಸಿದ್ದಾರೆ.
ಭೂ ಸುರಕ್ಷಾ ಯೋಜನೆಯಲ್ಲಿ ಹಿಂದೆ ಬಿದ್ದಿದ್ದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸಿಗಳು, ತಹಶೀಲ್ದಾರರು, ಶಿರಸ್ತೇದಾರರ ಸಭೆಯನ್ನು ಶುಕ್ರವಾರ ಸಚಿವರು ನಡೆಸಿದರು. ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು ಜನರ ಆಶಯದಂತೆ ಕೆಲಸ ಮಾಡಬೇಕು ಎಂದು ಎಚ್ಚರಿಸಿದ್ದಾರೆ.
ಎಸಿಗಳು, ತಹಶೀಲ್ದಾರರು ಕಡ್ಡಾಯವಾಗಿ ಇನ್ನು ಮುಂದೆ ಜನರಿಗೆ ಸಿಗಬೇಕು. ಜನರ ಆಶಯಗಳ ವಿರುದ್ಧ ಅಧಿಕಾರಿಗಳು ನಡೆದುಕೊಂಡ್ರೆ ಅಂತಹ ಅಧಿಕಾರಿಗಳ ಮೇಲೆ ಕೇಸ್ ದಾಖಲು ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಆನ್‌ಲೈನ್ ಸರ್ಟಿಫಿಕೇಶನ್ ವಿತರಣೆ ವಿಚಾರವನ್ನು ತಹಶೀಲ್ದಾರರು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿದ್ದಾರೆ. ರಾಜ್ಯದಾದ್ಯಂತ 21 ಲಕ್ಷ ಪುಟ ವಿತರಣೆ ಆಗಿದ್ದರೆ, ಬೆಂಗಳೂರು ನಗರ-ಗ್ರಾಮಾಂತರದಲ್ಲಿ ಕೇವಲ 27 ಪುಟ ವಿತರಣೆ ಆಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಬೆಂಗಳೂರು ನಗರ-ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ. ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾವೂ ಸಹಿಸಿಕೊಂಡಿದ್ದೇನೆ. ಇನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.