ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಮಾರನಬಸರಿ ಗ್ರಾಮದ ಬಸ್ ನಿಲ್ದಾಣವು ಬಣ್ಣವನ್ನು ಕಂಡು ಅದೆಷ್ಟೋ ವರ್ಷಗಳಾಗಿದ್ದವು. ಹೀಗಾಗಿ ಬಸ್ ನಿಲ್ದಾಣ ಅತ್ಯಂತ ಕುರೂಪಿಯಾಗಿ ಕಾಣುತ್ತಿತ್ತು. ಇದನ್ನು ಕಂಡ ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್‌ನ ಉಮೇಶ ಪಾಟೀಲ ಬಸ್ ನಿಲ್ದಾಣಕ್ಕೆ ಫೌಂಡೇಷನ್ ಮೂಲಕ ಬಣ್ಣ ಹಚ್ಚಿಸುವುದರ ಮೂಲಕ ಅದಕ್ಕೊಂದು ಮೆರುಗನ್ನು ನೀಡಿದ್ದಾರೆ. ಇದರಿಂದ ಈಗ ಬಸ್ ನಿಲ್ದಾಣವು ಅತ್ಯಂತ ಸುಂದರವಾಗಿ ಗೋಚರಿಸುತ್ತಿದೆ.
ಇದಕ್ಕೂ ಮೊದಲು ಬಸ್ ನಿಲ್ದಾಣವು ಕಸ-ಕಡ್ಡಿಗಳಿಂದ, ಬೇಡವಾದ ವಸ್ತುಗಳಿಂದ ಸಂಗ್ರಹಗೊಳಿ ಪ್ರಯಾಣಿಕರು ಅದರಲ್ಲಿ ಕೂರಲು ಅಸಾಧ್ಯ ಎಂಬುದಾಗಿತ್ತು. ಇದನ್ನು ಕಣ್ಣಾರೆ ಕಂಡ ಚನ್ನು ಪಾಟೀಲ ಫೌಂಡೇಷನ್ ಕಾರ್ಯಕರ್ತರು ಅದಕ್ಕೊಂದು ಕಾಯಕಲ್ಪವನ್ನು ನೀಡಬೇಕೆಂದು ನಿರ್ಧರಿಸಿ, ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡರು. ಪರ ಊರಿನವರು ತಮ್ಮ ಊರಿನ ಬಸ್ ನಿಲ್ದಾಣದ ಸ್ವಚ್ಛತೆಯ ಬಗ್ಗೆ ಅಕ್ಕರತೆ ತೋರುತ್ತಿರುವುದನ್ನು ಕಂಡು ಮಾರನಬಸರಿಯ ಗ್ರಾಮಸ್ಥರೂ ಸಹ ಚನ್ನು ಪಾಟೀಲ ಫೌಂಡೇಷನ್ ಅಡಿಯಲ್ಲಿ ನಡೆಯುತ್ತಿದ್ದ ಸ್ವಚ್ಛತಾ ಕೆಲಸಕ್ಕೆ ಕೈಜೋಡಿಸಿದರು.
ಬಸ್ ನಿಲ್ದಾಣವನ್ನು ಬರೀ ಸ್ವಚ್ಛಗೊಳಿಸಿದರೆ ಸಾಲದು. ಅದು ಇನ್ನಷ್ಟು ಅಂದವಾಗಿ ಕಾಣುವಂತೆ ಮಾಡಬೇಕೆಂಬ ಉತ್ಕಟೇಚ್ಛೆ ಫೌಂಡೇಷನ್‌ನ ಸಂಸ್ಥಾಪಕ ಉಮೇಶ ಪಾಟೀಲರಿಗಾಯಿತು. ಅದಕ್ಕಾಗಿ ಅವರು ಬಸ್ ನಿಲ್ದಾಣಕ್ಕೆ ಬಣ್ಣ ಹಚ್ಚಿಸಲು ನಿರ್ಧರಿಸಿದರು. ಈಗ ಬಣ್ಣ ಬಳಿದುಕೊಂಡು ನಿಂತಿರುವ ಮಾರನಬಸರಿಯ ಬಸ್ ನಿಲ್ದಾಣ ನೂತನ ಮದುವಣಗಿತ್ತಿಯಂತೆ ಸುಂದರವಾಗಿ ಕಂಗೊಳಿಸುತ್ತಿದೆ. ಈ ಉತ್ತಮ ಕಾರ್ಯ ಮಾಡಿದ್ದಕ್ಕಾಗಿ ಚನ್ನು ಪಾಟೀಲ ಫೌಂಡೇಷನ್‌ನವರನ್ನು ಗ್ರಾಮಸ್ಥರು ಅಭಿನಂದಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಷನ್‌ದ ಸಂಸ್ಥಾಪಕ ಉಮೇಶ ಪಾಟೀಲ, ಎಲ್ಲವನ್ನೂ ಸರಕಾರವೇ ಮಾಡಲಿ ಎಂದು ಕಾಯುತ್ತ ಕುಳಿತರೆ ನಡೆಯದು. ನಮ್ಮೂರಿನ ಸರಕಾರಿ ಆಸ್ತಿಗಳು ನಮ್ಮ ಹೆಮ್ಮೆಯಾಗಬೇಕು. ನಮ್ಮೂರಿನ ಬಸ್ ನಿಲ್ದಾಣವು ಶುಚಿಯಾಗಿದ್ದರೆ, ನೋಡಲು ಅಂದವಾಗಿದ್ದರೆ ಬಸ್ ನಿಲ್ದಾಣದಲ್ಲಿ ಕೂರಲು ಪ್ರಯಾಣಿಕರಿಗೆ ಹುರುಪು ಬರುತ್ತದೆ. ಇಲ್ಲವಾದರೆ ಅವರು ಮರದ ಕೆಳಗೋ, ಅಂಗಡಿಗಳ ಕೆಳಗೋ ನಿಂತುಕೊಳ್ಳಬೇಕಾಗುತ್ತದೆ. ಇದನ್ನು ಕಂಡೇ ಈ ಸಣ್ಣ ಪ್ರಯತ್ನವನ್ನು ಫೌಂಡೇಷನ್ ಮೂಲಕ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಚಂದ್ರಕಾಂತ್ ಮಾರನಬಸರಿ, ಶಿವಕುಮಾರ ದೊಡ್ಡೂರು, ವಿರೂಪಾಕ್ಷಪ್ಪ ಮಾರನಬಸರಿ, ಬಸವರಾಜ ಹಡಪದ, ಅಂದಾನಗೌಡ ಪಾಯಪ್ಪಗೌಡ್ರ, ಮರ್ತುಜಾಸಾಬ ಮೋತೆಖಾನ, ಖಾದಿರಸಾಬ ಕಳಕಾಪೂರ, ಹನುಮಂತಪ್ಪ ಹಡಗಲಿ, ಬಸಪ್ಪ ಮಾದರ, ಮುತ್ತಪ್ಪ ಅಂಗಡಿ, ಲಕ್ಷ್ಮಪ್ಪ ಬಂಕದ ಮುಂತಾದವರಿದ್ದರು.
ಇನ್ನು ಮುಂದೆ ಗ್ರಾಮಸ್ಥರು ಈ ನಿಲ್ದಾಣದ ಶುಚಿತ್ವಕ್ಕೆ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡಿ ಪ್ರಯಾಣಿಸುವವರಿಗೆ ಸುಖದ ಅನುಭವ ನೀಡಬೇಕು. ಈ ಮೂಲಕ ನಾವು ನಮ್ಮ ಫೌಂಡೇಷನ್ ಮೂಲಕ ಸಾರ್ವಜನಿಕ ಸ್ಥಳಗಳ ಶ್ರೇಯೋಭಿವೃದ್ಧಿಗಾಗಿ ಒಂದು ಮಹತ್ತರ ಹೆಜ್ಜೆಯನ್ನಿರಿಸಿದ್ದೇವೆ. ನಿಮ್ಮ ಸಹಕಾರ ಇರಲಿ ಎಂದು ಫೌಂಡೇಷನ್‌ನ ಸಂಸ್ಥಾಪಕ ಉಮೇಶ ಪಾಟೀಲ ಹೇಳಿದರು.


