HomeGadagಯಶಸ್ವಿಯಾದ ಜಿಲ್ಲಾಧಿಕಾರಿಗಳ ಜನತಾ ದರ್ಶನ | ಜಲ ಬವಣೆ ನೀಗಿಸಲು ಹೆಚ್ಚಿನ ಚರ್ಚೆ

ಯಶಸ್ವಿಯಾದ ಜಿಲ್ಲಾಧಿಕಾರಿಗಳ ಜನತಾ ದರ್ಶನ | ಜಲ ಬವಣೆ ನೀಗಿಸಲು ಹೆಚ್ಚಿನ ಚರ್ಚೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ :ಪಟ್ಟಣದ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ತಾಲೂಕಾಡಳಿತದಿಂದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಜರುಗಿತು.

ತಹಸೀಲ್ದಾರ ವಾಸುದೇವಸ್ವಾಮಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹೆಚ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಖುದ್ದು ಜಿಲ್ಲಾಧಿಕಾರಿಗಳೇ ಪ್ರತಿಯೊಬ್ಬರ ಅರ್ಜಿ ಪಡೆದು ಅರ್ಜಿದಾರರೊಂದಿಗೆ ಆತ್ಮೀಯವಾಗಿ ಮಾತನಾಡಿ ಅಹವಾಲು ಆಲಿಸಿದರು.

ಮುಖ್ಯವಾಗಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಕಳೆದ ಒಂದು ತಿಂಗಳಿನಿಂದ ನದಿ ನೀರು ಸರಬರಾಜು ನಿಂತಿದ್ದು, ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಪತ್ರಕರ್ತರು ಮತ್ತು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆಯೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ತುಂಗಭದ್ರಾ ಜಲಾಯಶದ ಪ್ರಾದೇಶಿಕ ಆಯುಕ್ತರನ್ನು ಸಂಪರ್ಕಿಸಿ ಜಲಾಶಯದಿಂದ ಫೆ.೭ರಂದೇ ನದಿಗೆ ನೀರು ಬಿಡಲಾಗಿದೆ. ೩-೪ ದಿನಗಳಲ್ಲಿ ನೀರು ಬರಲಿದೆ ಎಂಬ ಮಾಹಿತಿ ಪಡೆದರು.

 

ಆದರೆ ನೀರು ಹರಿದು ಬರುವ ವೇಳೆ ನದಿ ಪಾತ್ರದಲ್ಲಿನ ರೈತರು ಹಗಲೂ-ರಾತ್ರಿ ಪಂಪ್‌ಸೆಟ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರೆತ್ತಲಾಗುತ್ತದೆ. ಪಟ್ಟಣಕ್ಕೆ ನೀರೆತ್ತುವ ಮೇವುಂಡಿ ಜಾಕ್‌ವೆಲ್‌ನಿಂದಲೇ ರೈತರು ಪಂಪಸೆಟ್ ಮೂಲಕ ನೀರೆತ್ತುದ್ದಾರೆ. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ನೀರು ಸಂಗ್ರಹವಾಗುವ ವ್ಯವಸ್ಥೆಯಿಲ್ಲ ಎಂಬ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಕೂಡಲೇ ತಹಸೀಲ್ದಾರ, ಪುರಸಭೆ, ತಾಲೂಕಾ ಪಂಚಾಯತಿ, ಹೆಸ್ಕಾಂ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಅಲ್ಲಿರುವ ರೈತರ ಪಂಪ್‌ಸೆಟ್ ತೆರವುಗೊಳಿಸುವಂತೆ ಸೂಚಿಸಿದರು. ಈ ಕೆಲಸವನ್ನು ಹಾವೇರಿ, ರಾಣೇಬೆನ್ನೂರು, ಹರಿಹರ ಭಾಗದಲ್ಲಿಯೂ ಮಾಡುವಂತೆ ಅಲ್ಲಿನ
ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಗದಗ ಜಿಲ್ಲೆಯ ೪ ತಾಲೂಕುಗಳಿಗೆ ತುಂಗಭದ್ರಾ ನದಿ ನೀರೇ ಆಸರೆಯಾಗಿದ್ದು, ಸಹಕರಿಸುವಂತೆ ಕೋರಿದರು. ಈ ವೇಳೆ ಮುಖ್ಯಾಧಿಕಾರಿಗಳಿಗೆ ಪಟ್ಟಣ ವ್ಯಾಪ್ತಿಯ ಎಲ್ಲ ಬೋರ್‌ವೆಲ್ ಸರಿಪಡಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸೂಚಿಸಿದರು.

ಬಳಿಕ ಪಟ್ಟಣದಲ್ಲಿನ ಆಶ್ರಯ ನಿವೇಶನ ಫಲಾನುಭವಿಗಳ ಆಯ್ಕೆಯಲ್ಲಾದ ಅನ್ಯಾಯ ಸರಿಪಡಿಸಬೇಕು, ವಿವಿಧ ಯೋಜನೆಗಳಡಿ ರೈತರಿಗೆ ಲಭಿಸಿದ ಸಹಾಯಧನ ಅವರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಅಧಿಕಾರಿಗಳ ಕ್ರಮಕ್ಕೆ ಬ್ರೇಕ್ ಹಾಕಬೇಕು, ಗೃಹಲಕ್ಷ್ಮಿ, ಶಕ್ತಿಯೋಜನೆ, ಪಿಂಚಣಿಯಲ್ಲಾಗುತ್ತಿರುವ ಸಮಸ್ಯೆ, ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳು, ಹಳ್ಳ ಹಿಡಿದ ಯುಜಿಡಿ ಯೋಜನೆ, ವಿದ್ಯುತ್, ತಾಲೂಕು ಕೇಂದ್ರವಾದರೂ ಶಿರಹಟ್ಟಿಗೆ ಅಲೆಯುವುದು ತಪ್ಪದಿರುವ ಬಗ್ಗೆ, ಶಿಗ್ಲಿ ಗ್ರಾಮದಲ್ಲಿ ನೇಕಾರರು ಅನುಭವಿಸುತ್ತಿರುವ ಸಮಸ್ಯೆ, ನೀರಾವರಿ ರೈತರು ಅಂತರ್ಜಲಮಟ್ಟ ಕುಸಿತದ ಜತೆಗೆ ಕಾಡುಪ್ರಾಣಿಗಳಿಂದಾಗುತ್ತಿರುವ ಹಾನಿ, ಸೋಮೇಶ್ವರ ಸಹಕಾರಿ ನೂಲಿನ ಗಿರಣಿಯಿಂದ ತಮಗೆ ಅನ್ಯಾಯವಾಗಿದೆ ಎಂಬ ರೈತ ಕುಟುಂಬದ ಮನವಿ ಸೇರಿ ೫೦ಕ್ಕೂ ಹೆಚ್ಚು ಸಮಸ್ಯೆಗಳನ್ನು ಹೊತ್ತು ಅರ್ಜಿಯೊಂದಿಗೆ ಬಂದ ರೈತರು, ವೃದ್ಧರು, ಮಹಿಳೆಯರು, ಸಂಘಟಕರು ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ಈ ವೇಳೆ ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರಿಗೆ, ಜಿ.ಪಂ, ಪಿಡಬ್ಲೂಡಿ ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಸರ್ಕಾರಿ ಆಡಳಿತವು ಜನರಲ್ಲಿಗೆ ಹೋಗಿ ಅವರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗುತ್ತದೆ. ಇಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಸಾಧ್ಯವಾದರೆ ಸ್ಥಳದಲ್ಲಿಯೇ ಪರಿಹಾರ, ಇಲ್ಲವೇ ಆದ್ಯತೆಯ ಮೇರೆಗೆ ಪರಿಹಾರ ಕಲ್ಪಿಸಲಾಗುವುದು. ಸ್ವೀಕೃತವಾದ ಅರ್ಜಿಗಳು ಹಾಗೂ ಮನವಿಗಳನ್ನು ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಖಲಿಸುವುದು ಮತ್ತು ಅರ್ಜಿಗಳ ವಿಲೇವಾರಿಯನ್ನು ನಿರ್ವಹಿಸುವ ಪ್ರಕ್ರಿಯೆಯು ಜಿಲ್ಲಾಡಳಿತದಿಂದ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸ್ವೀಕೃತವಾದ ಅರ್ಜಿಗಳನ್ನು ಜಾಗೃತೆಯಿಂದ ಹಾಗೂ ಸಹಾನುಭೂತಿಯಿಂದ ಪರಿಶೀಲಿಸಿ ನಿಗದಿತ ಕಾಲಾವಧಿಯೊಳಗೆ ನಿಯಮಾನುಸಾರ ಪರಿಹಾರೋಪಾಯ ಒದಗಿಸಲಾಗುವುದು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!