ವಿಜಯಸಾಕ್ಷಿ ಸುದ್ದಿ, ಮುಳಗುಂದ : ವಿದ್ಯಾರ್ಹತೆಯೊಂದಿಗೆ ಕೌಶಲ್ಯಾಧಾರಿತ ತರಬೇತಿ ಪಡೆದಾಗ ಮಾತ್ರ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ ಹೇಳಿದರು.
ಅವರು ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಇಲಾಖೆ, ಆಂತರಿಕ ಗುಣಮಟ್ಟ ಭರವಸಾ ಕೋಶ, ಆಪ್ಟಿಮ್ ಮ್ಯಾನ್‌ಪಾವರ್ ಸೇವಾ ಸಂಸ್ಥೆ ಇವರ ಸಹಯೋಗದಲ್ಲಿ ಜರುಗಿದ ಒಂದು ದಿನದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಪದವಿ ಹಂತದಲ್ಲೇ ತರಬೇತಿಗಳನ್ನು ಪಡೆದುಕೊಳ್ಳುವುದರಿಂದ ಅನಾಯಾಸವಾಗಿ ಉದ್ಯೋಗದಲ್ಲಿ ತೋಡಗಿಕೊಳ್ಳಲು ಸಹಕಾರಿಯಾಗುತ್ತದೆ ಹಾಗೂ ಸರಕಾರಿ ಉದ್ಯೋಗಗಳನ್ನು ಕಾಯುತ್ತಾ ಕುಳಿತುಕೊಳ್ಳುವ ಬದಲು, ತಾವು ಬಯಸುವ ಉದ್ಯೋಗದ ಬಗ್ಗೆ ಕೌಶಲ್ಯ ಪಡೆದುಕೊಳ್ಳುವ ಅವಶ್ಯಕತೆಯಿದೆ. ಬಂದ ಅವಕಾಶದಿಂದ ಯಾವತ್ತೂ ಹಿಂಜರಿಯದೇ ಮೊದಲು ಬಂದ ಅವಕಾಶವನ್ನು ಪಡೆದುಕೊಳ್ಳಬೇಕು ಎಂದರು.
ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಫೋನ್, ಕರಾವಳಿ ಶಿಕ್ಷಣ ಸಂಸ್ಥೆಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಉದ್ಯೋಗಾಕಾಂಕ್ಷಿಗಳ ಆಯ್ಕೆ ಕಾರ್ಯ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾದ ಪಾಂಡುರಂಗ, ಅಶ್ವಿನಿ, ಶಿವಕುಮಾರ, ರಂಜಿತಾ ಹೆಗಡೆ, ಕಾಲೇಜು ಸಿಬ್ಬಂದಿಗಳಾದ ಅನುಪಮಾ, ಜಾನಕಿ ಮರಾಠೆ, ಡಾ. ಶಿವರಂಜನಿ, ಪ್ರಾಧ್ಯಾಪಕರು ಹಾಗೂ ಅತಿಥಿ ಪ್ರಾಧ್ಯಾಪಕರು ಇದ್ದರು.