ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಾಲೆಹೋಸೂರಿನ ಶ್ರೀ ದಿಂಗಾಲೇಶ್ವರಮಠ ಮತ್ತು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಅದ್ದೂರಿ ಜೋಡಿ ರಥೋತ್ಸವಗಳು ನೆರವೇರಿದವು.
ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ತೊಟ್ಟು ತಂಡೋಪತಂಡವಾಗಿ ದಿಂಗಾಲೇಶ್ವರ ಮಠ ಮತ್ತು ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದರು.
ರಥಕ್ಕೆ ಉಡಿ ತುಂಬಿ, ಹೊಸ ವಸ್ತಾçಭರಣಗಳನ್ನಿರಿಸಿ ಶೃದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ ದೃಶ್ಯ ಕಂಡು ಬಂದಿತು. ಸಂಜೆ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ನೆರವೇರಿತು. ಸೇರಿದ್ದ ಅಪಾರ ಭಕ್ತ ಸಮೂಹ ಭಕ್ತಿ-ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದರು. ಗ್ರಾಮದ ಮುಖ್ಯ ಸ್ಥಳದಲ್ಲಿ ಶ್ರೀ ಆಂಜನೇಯ ಮತ್ತು ದಿಂಗಾಲೇಶ್ವರಮಠದ ರಥಗಳು ಸೇರಿದ ಸಂದರ್ಭದಲ್ಲಿ ಭಕ್ತರ ಘೋಷಣೆಗಳು ಮುಗಿಲು ಮುಟ್ಟಿತ್ತು.
ಶ್ರೀಮಠದಲ್ಲಿ ಪ್ರಾತಃಕಾಲ ಶ್ರೀ ಗುರು ದಿಂಗಾಲೇಶ್ವರರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಷಟಸ್ಥಲ ದ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಮಂಗಳವಾರ ಸಂಜೆ 5ಕ್ಕೆ ಶ್ರೀ ಫಕೀರ ದಿಂಗಾಲೇಶ್ವರ ಜಗ್ಗುರುಗಳು ಕಡುಬಿನ ಕಾಳಗವನ್ನು ನೆರವೇರಿಸುವರು.