ಬಿಗ್ ಬಾಸ್ ಸೀಸನ್ 11’ರ ಆಟ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಹಿಂದೆ ಮೋಸದಾಟ ಆಡಿದ ಭವ್ಯಾಗೆ ಸುದೀಪ್ ಎಚ್ಚರಿಕೆ ನೀಡಿದ್ದರು. ಈ ಬಾರಿ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಲು ಧನರಾಜ್ ಮೋಸದಾಟ ಆಡಿ ಸಿಕ್ಕಿಬಿದ್ದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಅಂತಿಮ ದಿನಗಳತ್ತ ಸಾಗುತ್ತಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆ ದಿನಾಂಕ ಕೂಡ ನಿಗದಿಯಾಗಿದ್ದು, ಜನವರಿ 26 ಭಾನುವಾರ ಗಣರಾಜೋತ್ಸವದ ದಿನ ನಡೆಯಲಿದೆ. ಬಿಗ್ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಎಂಟು ಜನ ಉಳಿದುಕೊಂಡಿದ್ದು, ವಿನ್ನರ್ ಯಾರಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ.
ಇನ್ನೂ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಮಾಡುಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದಾರೆ. ಸದ್ಯ ಎಂಟು ಜನರ ಪೈಕಿ ಹನುಮಂತ ಟಿಕೆಟ್ ಟು ಫಿನಾಲೆ ಗೆದ್ದು ಫಿನಾಲೆಗೆ ಪ್ರವೇಶ ಪಡೆದಿದ್ದಲ್ಲದೇ ಬಿಗ್ ಬಾಸ್ ಕನ್ನಡ ಸೀಸನ್ 11ರ ಅಲ್ಟಿಮೇಟ್ ಕ್ಯಾಪ್ಟನ್ ಆಗಿ ನಾಮಿನೇಷನ್‌ನಿಂದ ಪಾರಾಗಿದ್ದಾರೆ. ಆದರೆ ಉಳಿದ ಸ್ಪರ್ಧಿಗಳ ಎದೆಯಲ್ಲಿ ಢವಢವ ಹೆಚ್ಚಾಗಿದೆ.
ಧನರಾಜ್, ಗೌತಮಿ ಜಾದವ್, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ ಗೌಡ ಹಾಗೂ ರಜತ್ ಈ ವಾರ ನಾಮಿನೇಟ್ ಆಗಿದ್ದು, ಈ ವಾರಾಂತ್ಯದಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ತಮ್ಮ ಮನೆಗೆ ಹೋಗುವುದು ಖಚಿತವಾಗಿದೆ.
ಈ ಎಲ್ಲದರ ಮಧ್ಯ ಬಿಗ್ ಬಾಸ್ ತಂಡದ ವಿರುದ್ಧ ಪ್ರೇಕ್ಷಕರ ಅಸಮಾಧಾನ ಜೋರಾಗಿದ್ದು, ಧನರಾಜ್‌ಗೆ ಅನ್ಯಾಯವಾಗಿದೆ ಎನ್ನುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲು ಹಾಗೂ ವಾರದ ಮಧ್ಯೆದ ಎಲಿಮಿನೇಷನ್‌ನಿಂದ ಪಾರಾಗಲು ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಿದ್ದು, ಈ ಟಾಸ್ಕ್ಗಳಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್‌ನಿಂದ ಪಾರಾಗಲಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದ್ದರು.
ವಾರದ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ಯ ಗೆದ್ದು ನಾಮಿನೇಷನ್‌ನಿಂದ ಪಾರಾದರು. ಆದರೆ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಕನ್ನಡಿ ನೋಡಿ ಮಾಡಿದ್ದಾರೆ ಎನ್ನುವುದನ್ನು ಇತರ ಸ್ಪರ್ಧಿಗಳಿಗೆ ತಿಳಿಸಿ ಅವರಿಗೆ ನೀಡಲಾಗಿದ್ದ ಇಮ್ಯೂನಿಟಿಯನ್ನು ಹಿಂಪಡೆಯಲಾಗಿದೆ. ಒಂದು ವೇಳೆ ಧನರಾಜ್ ಟಾಸ್ಕ್ ವೇಳೆ ಮಾಡಿದ್ದು ತಪ್ಪು ಅಂತಾದರೆ ಆಗಲೇ ಅದನ್ನು ತಿಳಿಸಿ ಮತ್ತೆ ಆಡಿಸಬಹುದಿತ್ತು. ಈ ಹಿಂದಿನ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ನಿಯಮ ಮೀರಿದ ಕಾರಣ ಮತ್ತೆ ಆ ಆಟವನ್ನು ಆಡಿಸಲಾಯಿತು. ಆದರೆ ಧನರಾಜ್ ವಿಚಾರದಲ್ಲಿ ಬಿಗ್ ಬಾಸ್ ತಂಡ ಹೀಗೆ ಮಾಡಿಲ್ಲ. ಬದಲಿಗೆ ಮೊದಲು ಇಮ್ಯೂನಿಟಿ ಕೊಟ್ಟು ಬಳಿಕ ವಾಪಸ್ ಪಡೆದುಕೊಂಡಿದೆ.
ಧನರಾಜ್ ಆಟದಲ್ಲಿ ಗ್ರೇ ಏರಿಯಾ ಬಳಕೆ ಮಾಡಿಕೊಂಡಿದ್ದಾರೆಯೇ ಹೊರತು ಮೋಸ ಮಾಡಿಲ್ಲ ಆದರೂ ಅವರಿಂದ ಇಮ್ಯೂನಿಟಿಯನ್ನು ಹಿಂಪಡೆಯಲಾಗಿದೆ. ಇದು ಬಿಗ್ ಬಾಸ್ ತಂಡ ಮಾಡುತ್ತಿರುವ ಮೋಸ ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಈ ಹಿಂದೆ ಭವ್ಯ ಗೌಡ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮಾಡಿದ ಮೋಸ ಬಟಾಬಯಲಾದರೂ ಕೂಡ ಆಕೆಯನ್ನೇ ಆ ವಾರದ ಕ್ಯಾಪ್ಟನ್ ಆಗಿ ಮುಂದುವರಿಸಲಾಗಿತ್ತು. ಆದರೆ ಈಗ ಧನರಾಜ್ ವಿಚಾರದಲ್ಲಿ ಬಿಗ್ ಬಾಸ್ ತಂಡ ಯಾಕೆ ಹೀಗೆ ಮಾಡಿದ್ದಾರೆ ಎನ್ನುವ ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುತ್ತಿದೆ.