ವಿಜಯಸಾಕ್ಷಿ ಸುದ್ದಿ, ಗದಗ: ಯಶಸ್ವಿ ಕಿಡ್ನಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕೆ.ಎಚ್. ಪಾಟೀಲರ ಕನಸು ನನಸು ಮಾಡಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ ಹಳ್ಳಿ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಸ್ಥಳಾಂತರಿಸಿ ಯಶಸ್ವಿಯಾಗಿದ್ದೇವೆ. ಕೆ.ಎಚ್. ಪಾಟೀಲ ಆಸ್ಪತ್ರೆಯ ಯುವ ತಜ್ಞ ವೈದ್ಯರ ತಂಡದ ಸಹಕಾರದಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಡಾ. ನಾಗನೂರ ಹೇಳಿದರು.
ಹುಲಕೋಟಿಯ ಹೊರ ವಲಯದಲ್ಲಿರುವ ಕೆ.ಎಚ್. ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮೊದಲ ಕಿಡ್ನಿ ಟ್ರಾನ್ಸ್‌ಫರ್ ಮಾಡುವಾಗ ಸ್ವಲ್ಪ ಚಿಂತೆ ಕಾಡುತ್ತಿತ್ತು. ಆದರೆ, ಈಗ ಯಶಸ್ವಿಯಾಗಿ ಮಾಡಲಾಗುತ್ತಿದೆ. ಕಿಡ್ನಿ ದಾನಿಗಳನ್ನು ಮೂರು ದಿನಕ್ಕೆ ಹಾಗೂ ಕಿಡ್ನಿ ಕಸಿ ಚಿಕಿತ್ಸೆಗೊಳಗಾದವರನ್ನು 5 ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಡಾ. ದೀಪಕ್ ಮತ್ತು ಡಾ. ನಿಯಾಜ್ ಸೇರಿದಂತೆ ಹಲವು ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಮೂಲೆ-ಮೂಲೆಗಳಿಂದ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದು ಸಂತೃಪ್ತರಾಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ. ದೀಪಕ್ ಕುರ್ಹಟ್ಟಿ, ಡಾ. ಭುವನೇಶ್ ಎನ್, ಡಾ. ಪವನ್ ಕೋಳಿವಾಡ್, ಡಾ. ನಿಯಾಜ್ ಅಹ್ಮದ್, ಡಾ. ವಿಶಾಲ್ ಕೆ, ಡಾ. ವಂದನಾ ಸೇರಿದಂತೆ ತಂಡದವರು ಉಪಸ್ಥಿತರಿದ್ದರು.
ಡಾ. ಅವಿನಾಶ್ ಓದುಗೌಡ್ರ ಮಾತನಾಡಿ, ದೇಶದಲ್ಲೇ ಮೊದಲ ಬಾರಿ ಗ್ರಾಮೀಣ ಭಾಗಕ್ಕೆ ಕಿಡ್ನಿ ಸ್ಥಳಾಂತರಿಸಿದ್ದೇವೆ. ಇದಕ್ಕೆ ಕೆ.ಎಚ್. ಪಾಟೀಲ ಹಾಗೂ ಡಿ.ಆರ್. ಪಾಟೀಲರ ಸಹಕಾರ ಬಹಳಷ್ಟಿದೆ. ಹಲವಾರು ಆಸ್ಪತ್ರೆಗಳಲ್ಲಿ ಸಾವಿರಾರು ಕಿಡ್ನಿ ಟ್ರಾನ್ಸ್‌ಫರ್ ಮಾಡುತ್ತಾರೆ. ಆದರೆ, ನಾವು ಮೂಲಸೌಲಭ್ಯವಿಲ್ಲದ ಹಳ್ಳಿ ಭಾಗಕ್ಕೆ ಸ್ಥಳಾಂತರಿಸಿದ್ದಕ್ಕೆ ಹೆಮ್ಮೆಯಾಗಿದೆ. ಸಾವಿನ ನಂತರವೂ ದೇಹದ ಭಾಗಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರತಿ ದಿನ ಕಿಡ್ನಿ ವೈಫಲ್ಯದಿಂದ ಭಾರತದಲ್ಲಿ ಕನಿಷ್ಠ 20 ಜನ ಸಾವನ್ನಪ್ಪುತ್ತಿದ್ದಾರೆ. ಈ ಸಾವಿನ ಸಂಖ್ಯೆ ಕಡಿಮೆ ಆಗಬೇಕಿದೆ ಎಂದರು.



