ಬಳ್ಳಾರಿ: ಇಂದು ರಾಜ್ಯದಾದ್ಯಂತ ನಡೆದ ಕೆ-ಸೆಟ್ ಪರೀಕ್ಷೆಯ ವೇಳೆ ಬಳ್ಳಾರಿಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳ ಒಳಗೆ ಬಿಡಲಾಯಿತು.
ಈ ವೇಳೆ ಅನೇಕ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ, ದೇವರ ದಾರ ಸೇರಿದಂತೆ ಮೈಮೇಲಿನ ಆಭರಣಗಳನ್ನು ಸಹ ಬಿಚ್ಚಿಸುವಂತೆ ಸೂಚಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಕೆಲ ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೂಗುತಿ, ಕಿವಿಯೋಲೆಗಳು ನಮ್ಮ ಪರಂಪರೆ ಮತ್ತು ನಂಬಿಕೆಯ ಭಾಗ. ಮಾಂಗಲ್ಯ, ಕಾಲುಂಗುರ ಹೇಗೋ ಹಾಗೆಯೇ ಇವುಗಳು ಸಹ ನಮಗೆ ಮಹತ್ವದವು. ಆದ್ರೂ ನಿಯಮ ಪಾಲನೆಗಾಗಿ ಬಿಚ್ಚಿಡಬೇಕಾಯಿತು” ಎಂದು ಕೆಲವು ಮಹಿಳಾ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು.
ಪರೀಕ್ಷೆಯ ಸಮಯದಲ್ಲಿ ಭದ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಹೊರ ಭಾಗದಲ್ಲಿದ್ದ ಎಲ್ಲಾ ಜೆರಾಕ್ಸ್ ಮತ್ತು ಇಂಟರ್‌ನೆಟ್ ಸೆಂಟರ್‌ಗಳು ಮುಚ್ಚಲ್ಪಟ್ಟಿದ್ದವು. ಯಾವುದೇ ರೀತಿಯ ಚೀಟಿಂಗ್ ಅಥವಾ ಅನಧಿಕೃತ ಮಾಹಿತಿಯ ಹರಿವು ತಪ್ಪಿಸಲು ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದರು. ಬಳ್ಳಾರಿಯಲ್ಲಿನ 20 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆಗಳು ಶಾಂತಿಯುತವಾಗಿ ನಡೆದವು. ಪರೀಕ್ಷೆ ಮುಗಿದ ಬಳಿಕ ಕೆಲವು ಅಭ್ಯರ್ಥಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕಿದರೂ, ಅಧಿಕಾರಿಗಳು ಎಲ್ಲ ಕ್ರಮಗಳು ಪರೀಕ್ಷೆಯ ನೈತಿಕತೆ ಕಾಪಾಡುವ ಉದ್ದೇಶದಿಂದಲೇ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.


