2023ಕ್ಕೆ ಗುಡ್ ಬಾಯ್ ಹೇಳಿ 2024ರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗ ಕೂಡ ಹೊಸ ಜೋಶ್ ನಿಂದ 2024ಕ್ಕೆ ಹಾಯ್ ಹೇಳಿದೆ. ಹೊಸ ವರ್ಷದ ಸುಸಂದರ್ಭದಲ್ಲಿ ಹೊಸ ಹೊಸ ಸಿನಿಮಾಗಳು ಘೋಷಣೆಯಾಗಿವೆ. ಅದರಂತೆ ‘ಬಿಸಿ-ಬಿಸಿ Ice-Cream’ ಕಥೆ ಹೇಳೋದಕ್ಕೆ ಸಿದ್ದವಾಗ್ತಿದ್ದಾರೆ ಅರವಿಂದ್ ಶಾಸ್ತ್ರೀ…
ಈ ಹಿಂದೆ ಕಹಿ, ಅಳಿದು ಉಳಿದವರು ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರೀ ‘ಬಿಸಿ-ಬಿಸಿ Ice-Cream’ಗೆ ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೊಸ ವರ್ಷಕ್ಕೆ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡ, ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ.
ಐಸ್ ಕ್ರೀಂ ಬಿಸಿ ಬಿಸಿಯಾಗಿರುತ್ತಾ..? ನೋ ಚಾನ್ಸ್..ಸಿನಿಮಾದ ಕಥೆಗೆ ಸೂಕ್ತ ಎನ್ನುವ ಕಾರಣಕ್ಕೆ ಅರವಿಂದ್ ಈ ಟೈಟಲ್ ಫಿಕ್ಸ್ ಮಾಡಿದ್ದಾರೆ. ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅರವಿಂದ್ ಐಯ್ಯರ್-ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೇ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
4 ವರ್ಷದ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅರವಿಂದ್ ಶಾಸ್ತ್ರೀ, ಒಂದೊಳ್ಳೆ ಫ್ರೆಶ್ ಕಥೆ ಮೂಲಕ ಪ್ರೇಕ್ಷಕರ ಎದುರು ಹಾಜರಾಗುತ್ತಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಚಿತ್ರಕ್ಕಿದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ನಡಿ ಅಕ್ಷರ ಭಾರಧ್ವಾಜ್ ‘ಬಿಸಿ-ಬಿಸಿ Ice-Cream’ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಟೈಟಲ್ ರಿವೀಲ್ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ ಕಹಳೆ ಮೊಳಗಿಸಿದೆ.