ಕಲಬುರಗಿ: ಕಲಬುರಗಿ ಜಿಲ್ಲೆಯ ಶಹಾಬಾದ್ ಮತ್ತು ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಾಲ್ಕು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಅಂತಾರಾಜ್ಯ ಕಳ್ಳ ಚಿರಾಗ್ ರಾಠೋಡ್, ಸುನೀಲ್, ಮೊಹಮ್ಮದ್ ಯೂನಸ್ ಸೇರಿದಂತೆ ಇನ್ನೂ ಮೂವರು ಆರೋಪಿಗಳು ಸೇರಿದ್ದಾರೆ. ಬಂಧಿತರಿಂದ ಕಳ್ಳತನಗೊಂಡ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಹಾಬಾದ್ ಠಾಣಾ ವ್ಯಾಪ್ತಿಯ ಹೊನಗುಂಟಾ ಗ್ರಾಮದ ಪ್ರಸಿದ್ಧ ಚಂದ್ರಲಾ ಪರವೇಶ್ವರಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮೂಲದ ಅಂತಾರಾಜ್ಯ ಕಳ್ಳ ಚಿರಾಗ್ ರಾಠೋಡ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶಹಾಬಾದ್ ಪಟ್ಟಣದಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು ದ್ವಿಚಕ್ರ ವಾಹನಗಳು ಹಾಗೂ 90 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಜೇವರ್ಗಿ ತಾಲೂಕಿನ ಎಸ್.ಎನ್. ಗುಡೂರು ಮತ್ತು ಇಜೇರಿ ಗ್ರಾಮಗಳಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳಲ್ಲೂ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಗುಡೂರಿನಲ್ಲಿ ಮನೆ ಬೀಗ ಮುರಿದು ಕಳವು ಮಾಡಿದ್ದ ಆರೋಪಿಯಾಗಿರುವ ಸುನೀಲ್ ಅನ್ನು ಬಂಧಿಸಲಾಗಿದ್ದು, ಅವನಿಂದ 51 ಗ್ರಾಂ ಚಿನ್ನಾಭರಣ, 212 ಗ್ರಾಂ ಬೆಳ್ಳಿ ಆಭರಣ ಹಾಗೂ 6 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಅದೇ ಗ್ರಾಮದ ಮತ್ತೊಂದು ಪ್ರಕರಣದಲ್ಲಿ ಸಂಬಂಧಿಕರ ಮನೆಗೆ ನುಗ್ಗಿ ಸುಲಿಗೆ ನಡೆಸಿದ್ದ ಮೊಹಮ್ಮದ್ ಯೂನಸ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮುಖಕ್ಕೆ ಮಾಸ್ಕ್ ಧರಿಸಿ ಚಾಕು ತೋರಿಸಿ ಸುಲಿಗೆ ನಡೆಸಿದ್ದನು. ಆತನಿಂದ 16 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಹಾಬಾದ್ ಹಾಗೂ ಜೇವರ್ಗಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



