ಬೆಂಗಳೂರು: ಕನಕದಾಸರು ಕೇವಲ ಭಕ್ತರಾಗಿರದೇ ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ದಾಸಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಯ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಂತ ಕನಕದಾಸರ ಜಯಂತಿಯನ್ನು ಸರ್ಕಾರ ಶ್ರದ್ಧಾಭಕ್ತಿಗಳಿಂದ ರಾಜ್ಯಾದ್ಯಂತ ಆಚರಿಸುತ್ತಿದೆ. ಕನಕದಾಸರ ಸಂದೇಶಗಳನ್ನು ಈ ನಾಡಿನ ಜನತೆಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ ಎಂದರು.
ಕನಕದಾಸರು ವಿಶ್ವಮಾನವರು
ಕನಕದಾಸರು ಸಮಾಜದಲ್ಲಿ ಬದಲಾವಣೆಯನ್ನು ತರಲು ಬಯಸಿದ್ದರು. ಶ್ರೀಕೃಷ್ಣನ ಮಹಾ ಭಕ್ತರಾಗಿದ್ದು ಉಡುಪಿಯಲ್ಲಿ ಕನಕನ ಕಿಂಡಿ ನಿರ್ಮಾಣವಾಗಲು ಕಾರಣರಾದರು. ಅಂಥವರ ಜನ್ಮ ದಿನವನ್ನು ಇಂದು ಆಚರಿಸುವ ಮೂಲಕ ಜನತೆಗೆ ಕನಕದಾಸರ ಬಗ್ಗೆ ಜನರಿಗೆ ತಿಳಿಸಿಕೊಡಲಾಗುತ್ತಿದೆ. ಅವರು ಆಕಸ್ಮಿಕವಾಗಿ ಕುರುಬ ಜನಾಂಗದಲ್ಲಿ ಹುಟ್ಟಿದ್ದರೂ ವಿಶ್ವಮಾನವರಾದರು ಎಂದರು.
“ಕುಲಕುಲ ವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂದು ಹೇಳಿ ಮನುಷ್ಯರೆಲ್ಲರೂ ಒಂದೇ ಎಂದು ಸಾರಿದರು. ತಮ್ಮ ಕೀರ್ತನೆ, ಹಾಡುಗಳ ಮೂಲಕ ಈ ಸಂದೇಶವನ್ನು ತಿಳಿಸಿದ್ದಾರೆ. ಅವರನ್ನು ಗೌರವಿಸಿ ಸ್ಮರಿಸುವ ಕೆಲಸವನ್ನು ಸರ್ಕಾರ ಇಂದು ಮಾಡುತ್ತಿದೆ ಎಂದರು.


