ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕನ್ನಡ ಬಳಗದ ವತಿಯಿಂದ ಕನ್ನಡೇತರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸಂಸ್ಥೆಯ ಜಿಮ್ಸ್ ಸಭಾಂಗಣದಲ್ಲಿ ಜರುಗಿತು.
ಭುವನೇಶ್ವರಿ ಮಾತೆಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಖ್ಯಾತ ಸಾಹಿತಿ ಡಾ. ಅರ್ಜುನ ಗೊಳಸಂಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕನ್ನಡ ಭಾಷೆಯ ಮಹತ್ವ ಹಾಗೂ ಬಳಕೆಯ ಕುರಿತಾಗಿ ಮಾತನಾಡಿದರು.
ಕನ್ನಡ ಬಳಗದ ಕಾರ್ಯಾಧ್ಯಕ್ಷ ಡಾ. ಶಂಭು ಪುರದ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಂಭು ಪುರದ ಅವರು ಕನ್ನಡೇತರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆಂದೇ ರಚಿಸಿರುವ `ಕನ್ನಡ ಕಲಿ’ ಪುಸ್ತಕಗಳನ್ನು ಹೊರರಾಜ್ಯದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಕನ್ನಡ ಭಾಷಾಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕೆಂದರು. ಶ್ರೀಕೃಷ್ಣಾ ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಎಲ್ಲರ ಮನ ಮುದಗೊಳಿಸಿತು. ಕೊನೆಯಲ್ಲಿ ಡಾ. ಶಕುಂತಲಾ ಅರಮನಿ ವಂದಿಸಿದರು.