ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದೆ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು, ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಡಾ. ಉಮೇಶ ವೀ.ಪುರದ ನುಡಿದರು.
ಪುರದ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ನಾಡು-ನುಡಿ, ಸಂಸ್ಕೃತಿ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಡಾ. ಶಂಭು ಪುರದ ಮಾತನಾಡಿ, ಕನ್ನಡದ ಗ್ರಂಥಗಳನ್ನು, ಪತ್ರಿಕೆಗಳನ್ನು, ಲೇಖನಗಳನ್ನು ಓದಬೇಕು. ಜೊತೆಗೆ ಭಾಷೆಯ ಕುರಿತಾಗಿ ಆಳವಾಗಿ ಅಧ್ಯಯನ ಮಾಡಿದಾಗ ನಮ್ಮ ಶಬ್ದ ಭಂಡಾರ ಹೆಚ್ಚಾಗುತ್ತದೆ. ತನ್ಮೂಲಕ ಯುವಜನತೆ ಭಾಷಾ ಸಂಪತ್ತನ್ನು ವರ್ಧಿಸಿಕೊಂಡು ತಮ್ಮದೇ ಶೈಲಿಯಲ್ಲಿ ವಿಭಿನ್ನ ಸಾಹಿತ್ಯಗಳನ್ನು ಬರೆಯಬೇಕು ಎಂದರು.
ಪ್ರಾಚಾರ್ಯರಾದ ಸಿಬಿಲ್ ನೀಲೂಗಲ್ ಮಾತನಾಡುತ್ತಾ, ಕನ್ನಡ ಭಾಷೆ ಬಹಳ ಸುಮಧುರವಾದ್ದು. ಕನ್ನಡ ಸಂಸ್ಕೃತಿಯನ್ನು ಬೆಳೆಸಲು ದಿನನಿತ್ಯ ಕನ್ನಡ ಸಾಹಿತಿಗಳ ಕೃತಿಗಳನ್ನು ಓದಬೇಕು. ಭಾಷೆಯ ಕುರಿತಾದ ಇತಿಹಾಸವನ್ನು ಓದಿದರೆ ಇತಿಹಾಸ ಬರೆಯಲು ಸಾಧ್ಯ ಎಂದರು.
ವಿದ್ಯಾರ್ಥಿನಿಯರಾದ ಕಾವ್ಯ ಹಾಗೂ ರಾಜೇಶ್ವರಿ ಮಾತನಾಡಿದರು. ಬ್ಲೆಸನ್ ಹಾಗೂ ದೆಬೋರ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಪುರದ, ಪೂರ್ವಿತಾ ಶಂಭು ಪುರದ ಉಪಸ್ಥಿತರಿದ್ದರು. ನೀಲಮ್ಮ ಪಾಟೀಲ ವಂದಿಸಿದರು.