ಕನ್ನಡಿಗರ ದೀರ್ಘ ಕಾಲದ ಹೋರಾಟದ ಫಲವೇ ಕರ್ನಾಟಕ ಏಕೀಕರಣ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಏಕೀಕರಣ ಹೋರಾಟದ ಹಿಂದೆ ಅನೇಕ ಮಹಾತ್ಮರ, ಹೋರಾಟಗಾರರ ಶ್ರಮವಿದೆ. ನಾಡಿನ ಭವ್ಯ ಪರಂಪರೆಯ ಇತಿಹಾಸವಿದೆ. ಕನ್ನಡಿಗರ ದೀರ್ಘ ಕಾಲದ ಹೋರಾಟದ ಫಲವೇ ಕರ್ನಾಟಕ ಏಕೀಕರಣ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. 

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2721ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕನ್ನಡ ಭಾಷೆ ಮಾತನಾಡುವ ಜನರು ಅರ್ಧದಷ್ಟು ಮೈಸೂರು ಪ್ರಾಂತ್ಯದಲ್ಲಿ, ಇನ್ನರ್ಧದಷ್ಟು ಮುಂಬೈ ಪ್ರಾಂತ್ಯದಲ್ಲಿ, ಮತ್ತೊಂದಿಷ್ಟು ಹೈದ್ರಾಬಾದ್ ಪ್ರಾಂತ್ಯದಲ್ಲಿ ಹರಿದು ಹಂಚಿಹೋಗಿದ್ದರು. ಕನ್ನಡ ಭಾಷಿಕರ ಪ್ರದೇಶವನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರು, ದೊಡ್ಡಮೇಟಿ ಅಂದಾನಪ್ಪನವರು, ಕೌತಾಳ ವೀರಪ್ಪನವರು, ಹುಯಿಲಗೋಳ ನಾರಾಯಣರಾಯರು, ಡೆಪ್ಯೂಟಿ ಚೆನ್ನಬಸಪ್ಪನವರು ಹೀಗೆ ಅನೇಕ ಮಹಾತ್ಮರು ಹೋರಾಟ ಮಾಡಿ ಕನ್ನಡ ತಲೆಯೆತ್ತಿ ನಿಲ್ಲುವಂತೆ ಮಾಡಿದರು.

ಕೆ.ಎಲ್.ಇ. ಸಂಸ್ಥೆಯ ಸಪ್ತರ್ಷಿಗಳು ಮರಾಠಿಗರ ಕಿರುಕುಳ ಸಹಿಸಿಕೊಂಡು ಕನ್ನಡ ಕಟ್ಟಿದರು. ಹಾಗೆಯೇ ಅನೇಕ ಮಠಮಾನ್ಯಗಳು ಕನ್ನಡ ಉಳಿಸುವ ಕಾರ್ಯವನ್ನು ಮಾಡಿದರು. ಅದರಲ್ಲಿ ಬೆಳಗಾಂವದ ನಾಗನೂರುಮಠ ಮುಂಚೂಣಿಯಲ್ಲಿದೆ. ಬೀದರಿನಲ್ಲಿ ಭಾಲ್ಕಿ ಪಟ್ಟದೇವರು ಹೊರಗೆ ಉರ್ದು ಶಾಲೆ ಎಂದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದರು ಎಂದು ಸ್ಮರಿಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶಂಕರಣ್ಣ ಮುನವಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬರು ಹುಟ್ಟಿದ ಮೇಲೆ ಸಮಾಜಕ್ಕಾಗಿ ಏನಾದರೂ ಕೆಲಸ ಮಾಡಬೇಕು. ಸಮಾಜದ ಏಳ್ಗೆಗೆ ಶ್ರಮಿಸಬೇಕು. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳೊಂದಿಗೆ ಡಂಬಳದವರೆಗೆ ಪಾದಯಾತ್ರೆ ಮಾಡಿದ್ದನ್ನು ಸ್ಮರಿಸಿಕೊಂಡರು. ನಾವು ಬದುಕಬೇಕು, ಸಮಾಜವನ್ನು ಬದುಕಿಸಬೇಕು. ಇದು ನಮ್ಮ ಗುರಿಯಾಗಬೇಕು ಎಂದರು.

ಹುಬ್ಬಳ್ಳಿಯ ಕೆ.ಎಲ್.ಇ. ಸಂಸ್ಥೆಯ ಬಿವಿಬಿ ಕಾಲೇಜಿನ ಪ್ರಾಧ್ಯಾಪಕ ವಿರೂಪಾಕ್ಷಯ್ಯ ಹೊಸಳ್ಳಿಮಠರಿಂದ ಬಾನ್ಸುರಿ ವಾದನ ನಡೆಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ಸೇವೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಂಶಿಮಠ ಹಾಗೂ ಈಶಣ್ಣ ಮುನವಳ್ಳಿ ಆಗಮಿಸಿದ್ದರು. ಧರ್ಮಗ್ರಂಥ ಪಠಣವನ್ನು ಶ್ರಾವಂತಿ ಎಸ್.ಕಟ್ಟಿ ಹಾಗೂ ವಚನ ಚಿಂತನವನ್ನು ವೀಣಾ ಬಿ.ಕಟ್ಟಿ ಮಾಡಿದರು. ದಾಸೋಹ ಸೇವೆಯನ್ನು ಮುರಿಗೆಪ್ಪ ಎಸ್.ನಾಲ್ವಾಡ, ಎಸ್.ಎಂ. ನಾಲ್ವಾಡ & ಕಂಪನಿ ಗದಗ ಹಾಗೂ ಪರಿವಾರದವರು ನೆರವೇರಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಪರಿಚಯಿಸಿದರೆ, ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ಮಂಜುಳಾ ಹಾಸೀಲಕರ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here